ಢಾಕಾ(ಮಾ.09): ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ರನ್ನು ಬಾಂಗ್ಲಾದೇಶ ಏಕದಿನ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. 

ಇತ್ತೀಚೆಗಷ್ಟೇ ಮಶ್ರಾಫೆ ಮೊರ್ತಜಾ ನಾಯಕತ್ವದಿಂದ ಕೆಳಗಿಳಿದಿದ್ದರು. ಏ.1ರಿಂದ ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಬಾಂಗ್ಲಾ ತಂಡವನ್ನು ತಮೀಮ್‌ ಇಕ್ಬಾಲ್‌ ಮುನ್ನಡೆಸಲಿದ್ದಾರೆ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್‌ ಹಸನ್‌ ಭಾನುವಾರ ತಿಳಿಸಿದರು.

ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಕಮ್‌ಬ್ಯಾಕ್!

ಮಶ್ರಾಫೆ ಮೊರ್ತಜಾ ಜಿಂಬಾಬ್ವೆ ವಿರುದ್ಧ ಕಡೆಯ ಬಾರಿಗೆ ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು. ಬಾಂಗ್ಲಾದೇಶ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದರೊಂದಿಗೆ ಮೊರ್ತಾಜಾ ಬಾಂಗ್ಲಾದೇಶ ಪರ ನಾಯಕನಾಗಿ 50 ಏಕದಿನ ಗೆಲುವುಗಳನ್ನು ತಂದಿಟ್ಟಿದ್ದರು.

ಕಳೆದ ವಾರವಷ್ಟೇ ತಮೀಮ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 7,000 ರನ್ ಪೂರೈಸಿದ್ದರು. ಈ ಮೂಲಕ ಸಾಧನೆ ಮಾಡಿದ ಮೊದಲ ಬಾಂಗ್ಲಾ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದರು. ಕಳೆದ 5 ವರ್ಷಗಳಿಂದಲೂ ಬಾಂಗ್ಲಾದೇಶ ತಂಡದ ಅವಿಭಾಜ್ಯ ಅಂಗವಾಗಿ ತಮೀಮ್ ಇಕ್ಬಾಲ್ ಗುರುತಿಸಿಕೊಂಡಿದ್ದಾರೆ. ಇದುವರೆಗೂ 207 ಏಕದಿನ ಪಂದ್ಯಗಳನ್ನಾಡಿರುವ ಎಡಗೈ ಬ್ಯಾಟ್ಸ್‌ಮನ್ ಮೂರು ಬಾರಿಯಷ್ಟೇ ಹಂಗಾಮಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.