ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು, ಋತುರಾಜ್ ಗಾಯಕ್ವಾಡ್ ನಾಯಕತ್ವದ ತಂಡದ ಆಟ ಗಮನ ಸೆಳೆಯಿತು. ಆದರೆ, ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ. ಋತುರಾಜ್ ಮತ್ತು ಖಲೀಲ್ ಅಹಮದ್ ಚೆಂಡಿನ ವಿರೂಪಕ್ಕೆ ಯತ್ನಿಸಿದ್ದಾರೆಂದು ಕೆಲವರು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು 4 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಮಾಜಿ ನಾಯಕ ಎಂ ಎಸ್ ಧೋನಿ ಮಿಂಚಿನ ವೇಗದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಸ್ಟಂಪಿಂಗ್ ಮಾಡಿದ್ದು ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿತು. ಇನ್ನು ರಚಿನ್ ರವೀಂದ್ರ ಆಕರ್ಷಕ 65 ರನ್ ಬಾರಿಸಿದ್ದು ಹಾಗೂ ಆಫ್ಘಾನ್ ಮೂಲದ ಯುವ ಸ್ಪಿನ್ನರ್ ನೂರ್ ಅಹಮದ್ 4 ವಿಕೆಟ್ ಕಬಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಇವೆಲ್ಲದರ ನಡುವೆ ಈ ಪಂದ್ಯದಲ್ಲಿ ಮತ್ತೊಂದು ಘಟನೆ ಇದೀಗ ಸುದ್ದಿಯ ಕೇಂದ್ರ ಬಿಂದು ಎನಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಆತಿಥೇಯ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಎಡಗೈ ವೇಗಿ ಖಲೀಲ್ ಅಹಮದ್ ಸೇರಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.
IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್ ಶರ್ಮಾ ಸಾಹಸ!
ಇಲ್ಲಿದೆ ನೋಡಿ ವಿಡಿಯೋ:
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೌಲಿಂಗ್ ಮಾಡುವ ವೇಳೆಯಲ್ಲಿ ಖಲೀಲ್ ಅಹಮದ್ ಹಾಗೂ ಋತುರಾಜ್ ಗಾಯಕ್ವಾಡ್ ಏನೋ ಒಂದು ಸಣ್ಣ ವಸ್ತವನ್ನು ಬದಲಾಯಿಸಿಕೊಂಡಂತೆ ವಿಡಿಯೋದಲ್ಲಿ ಕಂಡು ಬಂದಿತ್ತು. ಬಾಲ್ ಟ್ಯಾಂಪರಿಂಗ್ ಮಾಡಲು ಋತುರಾಜ್ ಗಾಯಕ್ವಾಡ್ ಸ್ಯಾಂಡ್ ಪೇಪರ್ ಬಳಸಿದ್ದಾರೆ ಎಂದು ಕೆಲ ನೆಟ್ಟಿಗರು ಆರೋಪ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗರು ಚೆಂಡು ವಿರೂಪಗೊಳಿಸಲು ಉಂಗುರವನ್ನು ಬಳಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟ; ಮೊದಲ ಬಾರಿ ಕನ್ನಡತಿಗೆ ಸ್ಥಾನ!
ಬ್ಯಾನ್ ಮಾಡಲು ಆಗ್ರಹ:
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮೇಲೆ ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಅವಧಿಗೆ ಐಪಿಎಲ್‌ನಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಒಟ್ಟಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕೆಲ ನೆಟ್ಟಿಗರು ಮುಂಬೈ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಾಲ್ ಟ್ಯಾಂಪರಿಂಗ್ ಮಾಡುವ ಮೂಲಕ ಮೋಸದಾಟವಾಡಿ ಪಂದ್ಯ ಗೆದ್ದಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೊಮ್ಮೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆಯ ಕುರಿತಂತೆ ಐಪಿಎಲ್ ಆರ್ಗನೈಸಿಂಗ್ ಬಾಡಿಯಾಗಲಿ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಾಗಲಿ ಅಥವಾ ಯಾವುದೇ ತಂಡದ ಆಟಗಾರರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಪಂದ್ಯ ಮುಕ್ತಾಯವಾಗಿ 24 ಗಂಟೆ ಕಳೆದರೂ ಈ ಕುರಿತಾದ ಚರ್ಚೆ ಮಾತ್ರ ನಿಂತಿಲ್ಲ.
