ಪಾಕಿಸ್ತಾನವನ್ನು ಬಗ್ಗುಬಡಿದು ಟಿ20 ಸರಣಿ ಗೆದ್ದ ಇಂಗ್ಲೆಂಡ್7 ಪಂದ್ಯಗಳ ಟಿ20 ಸರಣಿ 4-3 ಅಂತರದಲ್ಲಿ ಇಂಗ್ಲೆಂಡ್ ಪಾಲುಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್
ಲಾಹೋರ್(ಅ.03): ಬರೋಬ್ಬರಿ 17 ವರ್ಷಗಳ ಬಳಿಕ ದ್ವಿಪಕ್ಷೀಯ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿದ್ದ ಇಂಗ್ಲೆಂಡ್ ತಂಡವು, ಅದ್ಭುತ ಪ್ರದರ್ಶನ ತೋರುವ ಮೂಲಕ ಟಿ20 ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಳನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ 67 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 4-3 ಅಂತರದಲ್ಲಿ ಟಿ20 ಸರಣಿ ಇಂಗ್ಲೆಂಡ್ ಪಾಲಾಗಿದೆ.
ಇಲ್ಲಿನ ಗಢಾಪಿ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಇಂಗ್ಲೆಂಡ್ ತಂಡವು, 209 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೋಯಿನ್ ಅಲಿ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು 67 ರನ್‌ಗಳ ಜಯದ ನಗೆ ಬೀರಿತು. ನಿರ್ಣಾಯಕ ಪಂದ್ಯದಲ್ಲಿ ಫಾರ್ಮ್‌ನಲ್ಲಿದ್ದ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ದೊಡ್ಡ ಮೊತ್ತ ಬೆನ್ನತ್ತಿದ ಪಾಕಿಸ್ತಾನ ತಂಡವು ಮೊದಲ ಓವರ್‌ನಲ್ಲಿ ನಾಯಕ ಬಾಬರ್ ಅಜಂ ಅವರನ್ನು ಕಳೆದುಕೊಂಡಿತು. ಬಾಬರ್ ಅಜಂ 4 ರನ್ ಬಾರಿಸಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮರು ಓವರ್‌ನಲ್ಲೇ ಟೋಪ್ಲೆ, ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಬಲಿ ಪಡೆಯುವ ಮೂಲಕ ಪಾಕ್ ತಂಡಕ್ಕೆ ಡಬಲ್ ಶಾಕ್ ನೀಡಿದರು. ಪಾಕಿಸ್ತಾನ ತಂಡವು 5 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದು, ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತು.
ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಸೂದ್ 43 ಎಸೆತಗಳಲ್ಲಿ 56 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಇನ್ನು ಇಫ್ತಿಕರ್ ಅಹಮ್ಮದ್(19) ಹಾಗೂ ಖುಷ್‌ದಿಲ್ ಶಾ 27 ರ್ ಬಾರಿಸಿದರಾದರೂ, ಈ ಹೋರಾಟ ಪಾಕಿಸ್ತಾನ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಾಗಲಿಲ್ಲ. ಇನ್ನು ಸ್ಪೋಟಕ ಬ್ಯಾಟರ್ ಆಸಿಫ್ ಅಲಿ ಬ್ಯಾಟಿಂಗ್ ಕೇವಲ 7 ರನ್‌ಗಳಿಗೆ ಸೀಮಿತವಾಯಿತು. ಮೊಹಮ್ಮದ್ ನವಾಜ್ ಕೂಡಾ ಸಿಡಿಯಲಿಲ್ಲ.
Ind vs SA: ಅಸ್ಸಾಂನಲ್ಲಿ ಫೆಂಟಾಸ್ಟಿಕ್ ಫೋರ್ ವೈಲೆಂಟ್, ಇಂಡಿಯಾ ಆಟಕ್ಕೆ ಹರಿಣಗಳು ಸೈಲೆಂಟ್!
ಇದಕ್ಕೂ ಮೊದಲು ಟಾಸ್ ಸೋತರೂ, ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಸ್ಪೋಟಕ ಆರಂಭವನ್ನು ಪಡೆಯಿತು. ಮೊದಲ 4 ಓವರ್‌ಗಳಲ್ಲೇ ಫಿಲಿಫ್ ಸಾಲ್ಟ್ ಹಾಗೂ ಅಲೆಕ್ಸ್ ಹೇಲ್ಸ್ ಜೋಡಿ 39 ರನ್‌ಗಳ ಜತೆಯಾಟವಾಡಿತು. ಆದರೆ ಮೂರನೇ ವಿಕೆಟ್‌ಗೆ ಡೇವಿಡ್ ಮಲಾನ್ ಹಾಗೂ ಬೆನ್ ಡಕೆಟ್ 62 ರನ್‌ಗಳ ಜತೆಯಾಟ ನಿಭಾಯಿಸಿದರು. ಡೇವಿಡ್ ಮಲಾನ್ ಕೇವಲ 47 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ 78 ರನ್ ಬಾರಿಸಿದರೆ, ಹ್ಯಾರಿ ಬ್ರೂಕ್ ಕೇವಲ 29 ಎಸೆತಗಳಲ್ಲಿ 46 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
