* ಮಾರ್ಚ್ 05ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಸ್ಪಿನ್ ಮಾಂತ್ರಿಕ* ಶೇನ್ ವಾರ್ನ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಬೆನ್ನಲ್ಲೇ ತನಿಖೆ ಆರಂಭಿಸಿದ್ದ ಥಾಯ್ಲೆಂಡ್ ಪೊಲೀಸರು* ತನಿಖೆಯ ಬಳಿಕ ಮಾಹಿತಿ ಬಿಚ್ಚಿಟ್ಟ ಥಾಯ್ ಪೊಲೀಸರು
ಬ್ಯಾಂಕಾಕ್(ಮಾ.08): ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಹಠಾತ್ ನಿಧನರಾದ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ಆಸ್ಪ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ (Shane Warne) ಅವರದ್ದು ಸಹಜ ಸಾವು ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ‘ವಾರ್ನ್‌ರ ಶವ ಪರೀಕ್ಷೆ ನಡೆಸಿದ ವೈದ್ಯರು ಅದು ಸಹಜ ಸಾವು ಎಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ವಾರ್ನ್ ಕುಟುಂಬ ಮತ್ತು ಆಸ್ಪ್ರೇಲಿಯಾ ರಾಯಭಾರ ಕಚೇರಿಗೆ ಸಲ್ಲಿಸಲಾಗಿದೆ. ಅವರ ಸಾವಿನ ಹಿಂದೆ ಯಾವುದೇ ಸಂಶಯವಿಲ್ಲ’ ಎಂದು ಥಾಯ್ಲೆಂಡ್ ರಾಷ್ಟ್ರೀಯ ಪೊಲೀಸ್ ಉಪ ವಕ್ತಾರ ಕಿಸ್ಸಾನಾ ಎಂಬವರು ಮಾಹಿತಿ ನೀಡಿದ್ದಾರೆ.
ಶೇನ್ ವಾರ್ನ್ ಸಾವು ಕ್ರಿಕೆಟ್ ಲೋಕಕ್ಕೆ ಭಾರೀ ಆಘಾತ ನೀಡಿತ್ತು. ಅವರ ಸಾವಿನ ಹಿಂದೆ ಯಾರದ್ದಾದರೂ ಕೈವಾಡ ಇರಬಹುದಾ ಎನ್ನುವ ಪ್ರಶ್ನೆಗಳು ಸಹ ಹುಟ್ಟಿಕೊಂಡಿದ್ದವು. ಆ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ. ವಿಪರ್ಯಾವೆಂದರೆ ಮಾರ್ಚ್ 05ರ ಮುಂಜಾನೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಾಡ್ ಮಾರ್ಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ರಾಡ್ ಮಾರ್ಶ್ ನಿಧನಕ್ಕೆ ಸ್ವತಃ ಶೇನ್ ವಾರ್ನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಆದರೆ ಸಂಜೆ ವೇಳೆಗಾಗಲೇ ಸ್ವತಃ ಶೇನ್ ವಾರ್ನ್ ಅವರೇ ಕೊನೆಯುಸಿರೆಳೆದಿದ್ದರು.
2 ವಾರ ಕೇವಲ ದ್ರವ ಸೇವನೆ!
ಸಾವಿಗೂ ಮುನ್ನ 2 ವಾರ ವಿಶೇಷ ಡಯೆಟ್‌ನಲ್ಲಿದ್ದ ವಾರ್ನ್ ಸಣ್ಣ ಆಗುವ ಭರದಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ವಾರ್ನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ದೇಹದ ತೂಕ ಇಳಿಸಿಕೊಳ್ಳುತ್ತಿರುವುದಾಗಿ ಫೋಟೋವೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಈ ಸಂಬಂಧ ಸ್ಪಷ್ಟನೆ ನೀಡಿರುವ ಅವರ ವ್ಯವಸ್ಥಾಪಕ ಜೇಮ್ಸ್ ಎಸ್ಕ್ರೀನ್, ‘2 ವಾರ ಡಯೆಟ್‌ನಲ್ಲಿದ್ದ ವಾರ್ನ್ ಈ ವೇಳೆ ಕೇವಲ ದ್ರವ ಮಾತ್ರ ಸೇವನೆ ಮಾಡುತ್ತಿದ್ದರು. ಇದಕ್ಕೂ ಮೊದಲು ಅದೇ ರೀತಿ ಅವರು 3-4 ಬಾರಿ ಮಾಡಿದ್ದಾರೆ. ಸಾಯುವ ಕೆಲ ದಿನಗಳ ಹಿಂದೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅತಿಯಾಗಿ ಬೆವರುತ್ತಿರುವುದಾಗಿ ಹೇಳಿಕೊಂಡಿದ್ದರು’ ಎಂದಿದ್ದಾರೆ.
ಸರ್ಕಾರಿ ಗೌರವದೊಂದಿಗೆ ವಿದಾಯಕ್ಕೆ ಸಿದ್ಧತೆ
ಥಾಯ್ಲೆಂಡ್‌ನ ತಮ್ಮ ಬಂಗಲೆಯಲ್ಲಿ ನಿಧನರಾದ ವಾರ್ನ್ ಅವರ ಮೃತದೇಹವನ್ನು ಶೀಘ್ರದಲ್ಲೇ ಆಸ್ಪ್ರೇಲಿಯಾಗೆ ತರಲಾಗುತ್ತದೆ. ಅಂತ್ಯಕ್ರಿಯೆನ್ನು ಕುಟುಂಬಸ್ಥರು ಖಾಸಗಿಯಾಗಿ ನೆರವೇರಿಸಲಿದ್ದಾರೆ ಎಂದು ವರದಿಯಾಗಿದೆ. ಅದಕ್ಕೂ ಮುನ್ನ ವಾರ್ನ್ ಹಲವು ದಾಖಲೆಗಳನ್ನು ಬರೆದ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲು ಕ್ರಿಕೆಟ್ ಆಸ್ಪ್ರೇಲಿಯಾ (Cricktet Australia), ಆಸ್ಪ್ರೇಲಿಯಾ ಸರ್ಕಾರ ಸಿದ್ಧತೆ ಆರಂಭಿಸಿದೆ. ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಗುತ್ತದೆ ಎಂದು ತಿಳಿದುಬಂದಿದೆ. ಅಂತಿಮ ನಮನ ಸಲ್ಲಿಸಲು ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಸಾವಿಗೂ ಮುನ್ನ ಐಪಿಎಲ್ ನೆನಪು
ಶೇನ್ ವಾರ್ನ್ ಸಾಯುವ ಕೆಲ ಗಂಟೆಗಳ ಮೊದಲ ಐಪಿಎಲ್ (Indian Premier League) ಹಾಗೂ ಚೊಚ್ಚಲ ಆವೃತ್ತಿಯಲ್ಲಿ ತಮ್ಮ ನಾಯಕತ್ವದಡಿ ಚಾಂಪಿಯನ್ ಆಗಿದ್ದ ರಾಜಸ್ಥಾನ ರಾಯಲ್ಸ್ ತಂಡದೊಂದಿಗಿನ ನೆನಪು ಮೆಲುಕು ಹಾಕುತ್ತಿದ್ದರು ಎಂದು ಅವರ ಸ್ನೇಹಿತ ಟಾಮ್ ಹಾಲ್ ಎಂಬವರು ಮಾಹಿತಿ ನೀಡಿದ್ದಾರೆ. ‘ವಾರ್ನ್ 2008ರ ಐಪಿಎಲ್ ಗೆಲುವಿನ ಬಗ್ಗೆ ಹೇಳುತ್ತಾ ಸಂಭ್ರಮಿಸುತ್ತಿದ್ದರು. ಮೊದಲ ಪಂದ್ಯದಲ್ಲಿ ಸೋತರೂ ಚಾಂಪಿಯನ್ ಆಗಿದ್ದನ್ನು ಹೆಮ್ಮೆಯಿಂದಲೇ ಹೇಳುತ್ತಿದ್ದರು’ ಎಂದು ತಿಳಿಸಿದ್ದಾರೆ. ರವೀಂದ್ರ ಜಡೇಜಾ, ಯೂಸುಫ್ ಪಠಾಣ್ ಅವರಂತಹ ಯುವ ಅನನುಭವಿ ಆಟಗಾರರನ್ನು ಕಟ್ಟಿಕೊಂಡು ಶೇನ್ ವಾರ್ನ್ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
