ಮೆಲ್ಬರ್ನ್‌(ಮಾ.16): ಕಳೆದ ತಿಂಗಳು ಭಾರತ ಮೂಲದ ವಿನಿ ರಾಮನ್‌ ಜತೆ ಹೊಸ ಜೀವನಕ್ಕೆ ಕಾಲಿಡುವುದಾಗಿ ಘೋಷಿಸಿದ್ದ ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಭಾನುವಾರ ಇಲ್ಲಿ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡರು. 

ಭಾರತೀಯ ದೇಸಿ ಉಡುಗೆ ತೊಟ್ಟಿದ್ದ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ಎಲ್ಲರ ಗಮನ ಸೆಳೆದರು. ಭಾರತೀಯ ಮೂಲದವರಾಗಿರುವ ವಿನಿ ರಾಮನ್‌, ಆಸ್ಪ್ರೇಲಿಯಾದ ಪ್ರಜೆಯಾಗಿದ್ದು ಔಷಧಜ್ಞಾನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕಳೆದ 2 ವರ್ಷಗಳಿಂದ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌ ಡೇಟಿಂಗ್‌ ನಡೆಸುತ್ತಿದ್ದರು. ಹಲವು ಕಾರ್ಯಕ್ರಮಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ಭಾರತೀಯಳ ಜೊತೆ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!

ಆಸೀಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುವ ಲೆಕ್ಕಾಚಾರದಲ್ಲಿದೆ. 

ಕೊರೋನಾ ವೈರಸ್ ಭೀತಿಯಿಂದಾಗಿ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಇದರ ಹೊರತಾಗಿಯೂ ಐಪಿಎಲ್ ಆಯೋಜಿಸುವ ಕುರಿತಂತೆ ಅನಿಶ್ಚಿತತೆ ಮುಂದುವರೆದಿದೆ.