ವೆಲ್ಲಿಂಗ್ಟನ್(ಮಾ.06)‌: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ರೋಚಕ ಘಟ್ಟ ತಲುಪಿದ್ದು, ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 50 ರನ್‌ಗಳ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 20 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸಿತು. ನಾಯಕ ಆ್ಯರೋನ್‌ ಫಿಂಚ್‌ 55 ಎಸೆತಗಳಲ್ಲಿ 79 ರನ್‌ ಗಳಿಸಿದರು. ನ್ಯೂಜಿಲೆಂಡ್‌ ಪರ ಇಶ್ ಸೋದಿ 3, ಬೌಲ್ಟ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 18.5 ಓವರಲ್ಲಿ 106 ರನ್‌ಗೆ ಆಲೌಟ್‌ ಆಯಿತು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್‌ 30 ರನ್‌ ಗಳಿಸಿ ತಂಡದ ಪರ ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎನಿಸಿಕೊಂಡರು. ಕೇನ್‌ ರಿಚರ್ಡ್‌ಸನ್‌ 3, ಆಗರ್‌, ಜಂಪಾ ಹಾಗೂ ಮ್ಯಾಕ್ಸ್‌ವೆಲ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಆಸ್ಪ್ರೇಲಿಯಾ 156/6, ನ್ಯೂಜಿಲೆಂಡ್‌ 106/10