ಆಸೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ
ಆಸ್ಟ್ರೇಲಿಯಾ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿದ ಟೀಂ ಇಂಡಿಯಾ ಕೇವಲ 255 ರನ್ ಬಾರಿಸಲಷ್ಟೇ ಶಕ್ತವಾಗಿದೆ. ಧವನ್ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿದರೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದು ಆಸೀಸ್ ಪರ ಯಶಸ್ವಿ ಬೌಲರ್ ಎನಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮುಂಬೈ(ಜ.14): ಶಿಖರ್ ಧವನ್ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 255 ರನ್ ಬಾರಿಸಿದ್ದು, ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ 10 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್'ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಲು ಶಿಖರ್ ಧವನ್- ಕೆ.ಎಲ್ ರಾಹುಲ್ ಜೋಡಿ ಯಶಸ್ವಿಯಾಯಿತು. ಎರಡನೇ ವಿಕೆಟ್'ಗೆ ಈ ಜೋಡಿ 121 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆಸೀಸ್ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ತಂಡಕ್ಕೆ ನೆರವಾದರು. 47 ರನ್ ಬಾರಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಕೆ.ಎಲ್. ರಾಹುಲ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಆಸ್ಟನ್ ಅಗರ್‌ಗೆ ವಿಕೆಟ್ ಒಪ್ಪಿಸಿದರು. ಫಾರ್ಮ್‌ಗೆ ಮರಳಿರುವ ಶಿಖರ್ ಧವನ್ ಮಂದಗತಿಯ ಬ್ಯಾಟಿಂಗ್ ಆರಂಭಿಸಿದರು, ಆ ಬಳಿಕ ಸಮಯೋಚಿತ ಬ್ಯಾಟಿಂಗ್ ನಡೆಸಿದರು. 91 ಎಸೆತಗಳನ್ನು ಎದುರಿಸಿದ ಧವನ್ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ
ದಿಢೀರ್ ಕುಸಿದ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 130 ರನ್‌ಗಳವರೆಗೂ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಧವನ್-ರಾಹುಲ್ ವಿಕೆಟ್ ಪತನವಾಗುತ್ತಿದ್ದಂತೆ ನಾಟಕೀಯ ಕುಸಿತ ಕಂಡಿತು. ಕೇವಲ ಕೇವಲ 30 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಕೇವಲ 16 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕೇವಲ 4 ರನ್‌ಗಳಿಗೆ ಸೀಮಿತವಾಯಿತು.
ಪಂತ್-ಜಡೇಜಾ ಜತೆಯಾಟ: ದಿಢೀರ್ ಕುಸಿತದಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ ಕೆಳ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಆಸರೆಯಾದರು. 6ನೇ ವಿಕೆಟ್‌ಗೆ ಈ ಜೋಡಿ 49 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಪಂತ್ 33 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್ ಬಾರಿಸಿದರೆ, ಜಡೇಜಾ 32 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 25 ರನ್ ಬಾರಿಸಿದರು. ಕೊನೆಯಲ್ಲಿ ಮೊಹಮ್ಮದ್ ಶಮಿ(10), ಶಾರ್ದೂಲ್ ಠಾಕೂರ್(13) ಹಾಗೂ ಕುಲ್ದೀಪ್ ಯಾದವ್(17) ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರೆ, ಕೇನ್ ರಿಚರ್ಡ್‌ಸನ್ ಪ್ಯಾಟ್ ಕಮಿನ್ಸ್ ತಲಾ 2, , ಆಡಂ ಜಂಪಾ ಹಾಗೂ ಆಸ್ಟನ್ ಅಗರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ: 255/10
ಶಿಖರ್ ಧವನ್: 74
ಮಿಚೆಲ್ ಸ್ಟಾರ್ಕ್: 56/3