Asianet Suvarna News Asianet Suvarna News

Asia Cup 2022 ಶತಕ ಸಿಡಿಸಿ, ಟೀಕಾರರ ಕಾಲೆಳೆದ ಕಿಂಗ್‌ ಕೊಹ್ಲಿ..!

* ಏಷ್ಯಾಕಪ್ ಟೂರ್ನಿಯಲ್ಲಿ ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ
* 1020 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಿದ ಕೊಹ್ಲಿ
* ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ ವಿರಾಟ್ ಕೊಹ್ಲಿ

Asia Cup 2022 Virat Kohli takes dig at critics after record Asia Cup century against Afghanistan kvn
Author
First Published Sep 9, 2022, 2:33 PM IST

ದುಬೈ(ಸೆ.09): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಲು ವಿಫಲವಾಗಿದ್ದರೂ ಸಹಾ, ವಿರಾಟ್ ಕೊಹ್ಲಿ ಬಾರಿಸಿದ ಸ್ಪೋಟಕ ಶತಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ತಣಿಸಿದೆ. ಬರೋಬ್ಬರಿ 1020 ದಿನಗಳಿಂದ ಕಾತರದಿಂದ ಕಾದಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊನೆಗೂ ವಿರಾಟ್ ಕೊಹ್ಲಿ ಬ್ಯಾಟಿಂದ 71ನೇ ಅಂತಾರಾಷ್ಟ್ರೀಯ ಶತಕದ ಸಿಂಚನವಾಗಿದೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ 71ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ಬೌಲರ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಚೆಂಡನ್ನು ಬೌಂಡರಿಯ ಮೂಲೆ ಮೂಲೆಗಳಿಗೆ ಅಟ್ಟಿದರು. ಪರಿಣಾಮ ಕೇವಲ 53 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಭಾರತದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಚಚ್ಚುವ ಮೂಲಕ ಕೊನೆಗೂ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ಎದುರು ಕೇವಲ ಶತಕವನ್ನಷ್ಟೇ ದಾಖಲಿಸಲಿಲ್ಲ, ಬದಲಾಗಿ, ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಶ್ರೇಯವನ್ನು ಕಿಂಗ್ ಕೊಹ್ಲಿ ತನ್ನದಾಗಿಸಿಕೊಂಡರು. ವಿರಾಟ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿದರು. ಈ ಮೊದಲು 2017ರಲ್ಲಿ ಶ್ರೀಲಂಕಾ ಎದುರು 118 ರನ್ ಬಾರಿಸಿದ್ದೇ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತ್ತು.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ಹಂಗಾಮಿ ನಾಯಕ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 119 ರನ್‌ಗಳ ಜತೆಯಾಟ ಒದಗಿಸಿಕೊಟ್ಟಿತು. ಪರಿಣಾಮ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಕೇವಲ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಗುರಿ ಬೆನ್ನತ್ತಿದ ಆಫ್ಘಾನಿಸ್ತಾನಕ್ಕೆ ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಭುವಿ ಕೇವಲ 4 ರನ್ ನೀಡಿ ಅಗ್ರಕ್ರಮಾಂಕದ 5 ವಿಕೆಟ್ ಕಬಳಿಸಿದರು. ಇದರ ಪರಿಣಾಮ ಆಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8  ವಿಕೆಟ್ ಕಳೆದುಕೊಂಡು 111 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಂ ಇಂಡಿಯಾ 101 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತು.

'ಎಂದೆಂದಿಗೂ ನಿಮ್ಮ ಜತೆಗಿರುತ್ತೇನೆ'; ಕಿಂಗ್ ಕೊಹ್ಲಿಗೆ ಮುದ್ದಾದ ಸಂದೇಶ ರವಾನಿಸಿದ ಅನುಷ್ಕಾ ಶರ್ಮಾ

ಆಫ್ಘಾನ್ ಎದುರು ಅದ್ಭುತ ಪ್ರದರ್ಶನ ತೋರಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ನನ್ನ ಆಟವನ್ನು ಎಂಜಾಯ್ ಮಾಡುತ್ತೇನೆ. ಇಂದಿನ ಪ್ರದರ್ಶನವು ಕಳೆದ ಕೆಲ ಪಂದ್ಯಗಳ ಮುಂದುವರೆದ ಭಾಗವಷ್ಟೇ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದೇನೆ. ಆದರೆ ನನಗೆ ನಿಜಕ್ಕೂ ಅಚ್ಚರಿ ಎನಿಸಿದ್ದು, ನಾನು 60 ರನ್ ಬಾರಿಸಿದ್ದು ಕೂಡಾ ಜನ ವೈಫಲ್ಯ ಎನ್ನತೊಡಗಿದ್ದು. ಇದು ನನಗೆ ಆಘಾತವನ್ನುಂಟು ಮಾಡಿತ್ತು. ನಾನು ತುಂಬಾ ಚೆನ್ನಾಗಿ ಆಡಿ, ತಂಡಕ್ಕೆ ಉತ್ತಮ ಕಾಣಿಕೆ ನೀಡಿದರೂ ಸಹಾ ಅದು ಸಾಕಾದಂತೆ ಕಾಣಿಸುತ್ತಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

 'ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲಿ ನನ್ನೊಂದಿಗೆ ನನ್ನ ತಂಡ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತಿತ್ತು. ಇಂಥಹ ಕಠಿಣ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ನನ್ನ ಜತೆಗಿದ್ದರು. ಈ ಶತಕವನ್ನು ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Follow Us:
Download App:
  • android
  • ios