ಕ್ರಿಕೆಟ್‌ನ ಸಾಂಪ್ರದಾಯಿಕ ವೈರಿಗಳು ಮತ್ತೊಮ್ಮೆ ಏಷ್ಯಾಕಪ್‌ನಲ್ಲಿ ಕಾದಾಟ ನಡೆಸುತ್ತವೆ. ಒಂದು ವಾರದ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್‌ ಟಿ20 ಟೂರ್ನಿಯ ಸೂಪರ್‌ 4 ಹಂತದಲ್ಲಿ ಕಾದಾಟ ನಡೆಸುತ್ತಿದೆ. 

ದುಬೈ (ಸೆ.4): ವಿಶ್ವ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಳು ದಿನಗಳ ಅಂತರದಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಗಾಯದ ಕಾರಣದಿಂದಾಗಿ ಟೀಮ್‌ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗಿದೆ. ಮೊಣಕಾಲು ಗಾಯದಿಂದಾಗಿ ಇಡೀ ಏಷ್ಯಾಕಪ್‌ ಟೂರ್ನಿಯಿಂದ ಹೊರಬಿದ್ದಿರುವ ರವೀಂದ್ರ ಜಡೇಜಾ ಬದಲಿಗೆ ಅಕ್ಸರ್‌ ಪಟೇಲ್‌ ತಂಡ ಕೂಡಿಕೊಂಡಿದ್ದರೂ, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆದಿಲ್ಲ. ಜ್ವರದ ಕಾರಣದಿಂದಾಗಿ ಅವೇಶ್‌ ಖಾನ್‌ ಕೂಡ ಪಂದ್ಯದಲ್ಲಿ ಆಡುತ್ತಿಲ್ಲ. ಇನ್ನೊಂದೆಡೆ ಪಾಕಿಸ್ತಾನ ತಂಡ ಕೂಡ ಸಮಸ್ಯೆ ಎದುರಿಸಿದ್ದು, ಸೈಡ್‌ ಸ್ಟ್ರೇನ್‌ನಿಂದಾಗಿ ಶಹನವಾಜ್‌ ದಹಾನಿ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ವಾರದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಂಡ ಗೆಲುವು, ಪಾಕ್‌ ವಿರುದ್ಧ ಆಡಿದ 10 ಪಂದ್ಯಗಳಲ್ಲಿ ಟೀಮ್‌ ಇಂಡಿಯಾದ 8ನೇ ಗೆಲುವು ಎನಿಸಿದೆ. ಪಂದ್ಯಕ್ಕಾಗಿ ಟೀಮ್‌ ಇಂಡಿಯಾ ಮೂರು ಬದಲಾವಣೆ ಮಾಡಿದೆ. ರವೀಂದ್ರ ಜಡೇಜಾ, ದಿನೇಶ್‌ ಕಾರ್ತಿಕ್‌ ಹಾಗೂ ಆವೇಶ್‌ ಖಾನ್‌ ಬದಲು, ದೀಪಕ್‌ ಹೂಡಾ, ರವಿ ಬಿಷ್ಣೋಯಿ ಹಾಗೂ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ಸೇರಿದ್ದಾರೆ.

ಭಾರತ ತಂಡ ಪ್ಲೇಯಿಂಗ್‌ ಇಲೆವೆನ್‌: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ನಾವೂ ಕೂಡ ಮೊದಲು ಬೌಲಿಂಗ್‌ ಮಾಡಲು ಬಯಸಿದ್ದೆವು. ಆದರೆ, ಈಗ ನಾವೂ ನಿರ್ಭೀತಿಯಿಂದ ಆಡುವ ಮೂಲಕ, ಪಿಚ್‌ನಲ್ಲಿ ಉತ್ತಮ ಮೊತ್ತವನ್ನು ಪೇರಿಸಬೇಕಿದೆ. ಇಂಥ ಮಾದರಿಯಲ್ಲಿ ಹಿಂದಿನ ಪಂದ್ಯಗಳಲ್ಲಿ ನಾವ ಯಾವ ರೀತಿ ಆಡಿದ್ದೇವೆ ಎನ್ನುವುದೂ ಕೂಡ ಮುಖ್ಯವಾಗುತ್ತದೆ. ಆಂತರಿಕ ಒತ್ತಡಗಳ ಬಗ್ಗೆ ಹೆಚ್ಚಾಗಿ ತಲೆಕಡಿಸಿಕೊಳ್ಳಬಾರದು. ಗಾಯವಾಗುವ ವಿಚಾರಗಳನ್ನು ನಾವು ಕಂಟ್ರೋಲ್‌ ಮಾಡಲು ಸಾಧ್ಯವಿಲ್ಲ. ಜಡೇಜಾ ಗಾಯಗೊಂಡಿದ್ದಾರೆ ಹಾಗೂ ತವರಿಗೆ ತೆರಳಿದ್ದಾರೆ. ಇದರಿಂದಾಗಿ ಪ್ಲೇಯಿಂಗ್‌ ಇಲೆವೆನ್ ಆಯ್ಕೆ ಮಾಡುವುದೇ ತಲೆನೋವಾಗಿತ್ತು. ಹಾರ್ದಿಕ್‌ ಪಾಂಡ್ಯ ತಂಡಕ್ಕೆ ವಾಪಸಾಗಿದ್ದಾರೆ. ಅವರೊಂದಿಗೆ ದೀಪಕ್‌ ಹೂಡಾ ಹಾಗೂ ರವಿ ಬಿಷ್ಣೋಯ್‌ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ರೋಹಿತ್‌ ಶರ್ಮ (Rohit Sharma) ಟಾಸ್‌ (Asia Cup) ವೇಳೆ ಹೇಳಿದ್ದಾರೆ. 

ಪಾಕಿಸ್ತಾನ ತಂಡ ಪ್ಲೇಯಿಂಗ್‌ ಇಲೆವೆನ್‌: ಮೊಹಮ್ಮದ್ ರಿಜ್ವಾನ್(ವಿ.ಕೀ), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನಾಯಿನ್‌, ನಸೀಮ್ ಶಾ.

Asia Cup 2022: ಭಾರತ ಎದುರಿನ ಪಂದ್ಯಕ್ಕೂ ಮುನ್ನ ಪಾಕ್‌ ತಂಡಕ್ಕೆ ಬಿಗ್ ಶಾಕ್, ಮಾರಕ ವೇಗಿ ಔಟ್..!

ನಾವು ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ಮಾಡಿದ್ದೇವೆ. ಅದಕ್ಕೆ ಇಬ್ಬನಿಯ ಅಂಶ ಕಾರಣ. 2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಕಷ್ಟವಾಗುತ್ತದೆ. ಭಾರತ ವಿರುದ್ಧದ ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದರೂ ಸಾಕಷ್ಟು ಪಾಸಿಟಿವ್‌ ಅಂಶಗಳು ಅದರಲ್ಲಿದ್ದವು. ಈ ಪಂದ್ಯದಲ್ಲೂ ಧನಾತ್ಮಕ ಅಂಶವಿದೆ. ನಮ್ಮಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೊಹಮದ್‌ ಹಸ್ನಾಯಿನ್‌ ತಂಡಕ್ಕೆ ಬಂದಿದ್ದಾರೆ ಎಂದು ಟಾಸ್‌ ವೇಳೆ ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್‌ ಅಜಮ್‌ (Babar Azam) ಹೇಳಿದ್ದಾರೆ.

Mushfiqur Rahim Retires ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮುಷ್ಫಿಕುರ್ ..!

ನಿಮಗಿದು ಗೊತ್ತೇ:
- ಯುಎಇಯಲ್ಲಿ ನಡೆದ ಕ್ರಿಕೆಟ್‌ನ ಎಲ್ಲಾ ಮಾದರಿಯ 30 ಪಂದ್ಯಗಳ ಪೈಕಿ 20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿದೆ.

- 2022ರಲ್ಲಿ ಆಡಿದ 24 ಟಿ20 ಪಂದ್ಯಗಳಲ್ಲಿ ಅಕ್ಸರ್‌ ಪಟೇಲ್‌ 15 ವಿಕೆಟ್‌ ಉರುಳಿಸಿದ್ದಾರೆ.