Asianet Suvarna News Asianet Suvarna News

Ashes Test: ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡ ಪ್ರಕಟ..!

* ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ

* ಉಭಯ ತಂಡಗಳಲ್ಲೂ ಒಂದೊಂದು ಮಹತ್ವದ ಬದಲಾವಣೆ

* ಆ್ಯಷಸ್ ಟೆಸ್ಟ್ ಸರಣಿ ಈಗಾಗಲೇ 3-0 ಅಂತರದಲ್ಲಿ ಆಸ್ಟ್ರೇಲಿಯಾ ಪಾಲು

Ashes Test Australia and England Squad announces for Sydney Test Both Team Made one Change kvn
Author
Bengaluru, First Published Jan 4, 2022, 10:47 AM IST

ಸಿಡ್ನಿ(ಜ.04): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ನಾಲ್ಕನೇ ಟೆಸ್ಟ್‌ ಪಂದ್ಯವು ಜನವರಿ 05ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಸಿಡ್ನಿ ಟೆಸ್ಟ್‌ (Sydney Test) ಪಂದ್ಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಆಡುವ ಹನ್ನೊಂದರ ಬಳಗ ಪ್ರಕಟಗೊಂಡಿದ್ದು, ಉಭಯ ತಂಡಗಳಲ್ಲೂ ತಲಾ ಒಂದೊಂದು ಮಹತ್ವದ ಬದಲಾವಣೆಗಳಾಗಿವೆ.

ಹೌದು, 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದ್ದು, ಕ್ಲೀನ್‌ ಸ್ವೀಪ್‌ನತ್ತ ಚಿತ್ತ ನೆಟ್ಟಿದೆ. ಮೆಲ್ಬೊರ್ನ್‌ ಟೆಸ್ಟ್‌ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದ ಸ್ಕಾಟ್‌ ಬೊಲ್ಯಾಂಡ್‌ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೋವಿಡ್‌ ಸೋಂಕಿಗೆ ಒಳಗಾಗಿರುವ ಟ್ರಾವಿಸ್ ಹೆಡ್‌ ಈಗಾಗಲೇ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಉಸ್ಮಾನ್ ಖವಾಜ (Usman Khawaja) ಆಸೀಸ್ ತಂಡವನ್ನು ಕೂಡಿಕೊಂಡಿದ್ದಾರೆ. ಉಸ್ಮಾನ್ ಖವಾಜ 2019ರ ಆ್ಯಷಸ್ ಟೆಸ್ಟ್ ಸರಣಿಯ ಹೆಡಿಗ್ಲಿ ಟೆಸ್ಟ್‌ ಪಂದ್ಯದಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬರೋಬ್ಬರಿ 2 ವರ್ಷಗಳ ಬಳಿಕ ಖವಾಜಗೆ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಮಣೆ ಹಾಕಿದೆ. 

ಇನ್ನುಳಿದ ಚೊಚ್ಚಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 7 ರನ್‌ ನೀಡಿ 6 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ವೇಗಿ ಸ್ಕಾಟ್ ಬೊಲ್ಯಾಂಡ್, ಇದೀಗ ಸಿಡ್ನಿ ಟೆಸ್ಟ್‌ ಪಂದ್ಯದಲ್ಲೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೊಂಟ ನೋವಿನಿಂದ ಬಳಲುತ್ತಿರುವ ಅನುಭವಿ ವೇಗಿ ಜೋಶ್ ಹೇಜಲ್‌ವುಡ್‌ (Josh Hazlewood) ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ಬೊಲ್ಯಾಂಡ್‌ಗೆ ಅವಕಾಶ ಒದಗಿಬಂದಿದೆ.

Ashes 2021-22: ಟ್ರಾವಿಸ್ ಹೆಡ್‌ಗೆ ಕೋವಿಡ್ ಪಾಸಿಟಿವ್, ಆಸೀಸ್ ತಂಡದಲ್ಲಿ ಮಹತ್ವದ ಬದಲಾವಣೆ..!

ಇನ್ನು ಈಗಾಗಲೇ ಆ್ಯಷಸ್ ಟೆಸ್ಟ್ ಸರಣಿ ಕೈಚೆಲ್ಲಿ ಕುಳಿತಿರುವ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಇದೀಗ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಾಗಿದೆ. ಮೆಲ್ಬೊರ್ನ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದೆದುರು ಇಂಗ್ಲೆಂಡ್ ತಂಡವು ಇನಿಂಗ್ಸ್‌ ಹಾಗೂ 14 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಇದಕ್ಕೂ ಮೊದಲು ಬ್ರಿಸ್ಬೇನ್ ಹಾಗೂ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸಿದ್ದರಿಂದ ಇನ್ನೂ 2 ಪಂದ್ಯಗಳ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು (Australia Cricket Team) ಆ್ಯಷಸ್ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಇದೀಗ ಇಂಗ್ಲೆಂಡ್ ತಂಡವು (England Cricket Team) ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಕೇವಲ ಒಂದು ಬದಲಾವಣೆಯನ್ನು ಮಾಡಿದ್ದು, ವೇಗಿ ಓಲಿ ರಾಬಿನ್‌ಸನ್ ಬದಲಿಗೆ ಅನುಭವಿ ವೇಗಿ ಸ್ಟುವರ್ಟ್‌ ಬ್ರಾಡ್‌ಗೆ (Stuart Broad) ಮಣೆ ಹಾಕಲಾಗಿದೆ. ಓಲಿ ರಾಬಿನ್‌ಸನ್ ಹಾಗೂ ಕ್ರಿಸ್‌ ವೋಕ್ಸ್‌ ಭುಜದ ನೋವಿನಿಂದ ಬಳಲುತ್ತಿದ್ದು, ಅವರ ಬದಲಿಗೆ ಸ್ಟುವರ್ಟ್‌ ಬ್ರಾಡ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅನುಭವಿ ವೇಗಿಗಳಾದ ಜೇಮ್ಸ್‌ ಆ್ಯಂಡರ್‌ಸನ್ (James Anderson) ಹಾಗೂ ಸ್ಟುವರ್ಟ್‌ ಬ್ರಾಡ್‌ ವೇಗದ ಬೌಲಿಂಗ್‌ ಜವಾಬ್ದಾರಿಯನ್ನು ಹೊರಲಿದ್ದಾರೆ. 

ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಉಭಯ ತಂಡಗಳು ಹೀಗಿವೆ ನೋಡಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡ: ಡೇವಿಡ್ ವಾರ್ನರ್‌, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜ, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್‌, ನೇಥನ್ ಲಯನ್, ಸ್ಕಾಟ್ ಬೊಲ್ಯಾಂಡ್

ಇಂಗ್ಲೆಂಡ್ ಕ್ರಿಕೆಟ್ ತಂಡ: ಹಸೀಬ್ ಹಮೀದ್‌, ಜಾಕ್‌ ಕ್ರಾವ್ಲೆ, ಡೇವಿಡ್ ಮಲಾನ್, ಜೋ ರೂಟ್‌(ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೋವ್‌, ಜೋಸ್ ಬಟ್ಲರ್, ಮಾರ್ಕ್‌ ವುಡ್‌, ಜಾಕ್ ಲೀಚ್, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್ ಆ್ಯಂಡರ್‌ಸನ್.

Follow Us:
Download App:
  • android
  • ios