Asianet Suvarna News Asianet Suvarna News

Ashes Test: ಗಾಬಾ ಟೆಸ್ಟ್ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ದೊಡ್ಡ ಶಾಕ್ ಕೊಟ್ಟ ಐಸಿಸಿ..!

* ಗಾಯದ ಮೇಲೆ ಬರೆ ಎಳೆದಂತಾದ ಇಂಗ್ಲೆಂಡ್ ತಂಡದ ಪರಿಸ್ಥಿತಿ

* ಗಾಬಾ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲು ಕಂಡು ಇಂಗ್ಲೆಂಡ್‌

* ನಿಧಾನಗತಿ ಬೌಲಿಂಗ್ ಮಾಡಿದ ತಪ್ಪಿಗೆ ಇಂಗ್ಲೆಂಡ್ ತಂಡಕ್ಕೆ 100% ದಂಡ

Ashes Test 2021 England Cricket Team lose 5 World Test Championship points for slow over rate kvn
Author
Bengaluru, First Published Dec 11, 2021, 5:43 PM IST

ಬ್ರಿಸ್ಬೇನ್‌(ಡಿ.11): ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) ಮೊದಲ ಪಂದ್ಯದಲ್ಲೇ 9 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡು ಮುಖಭಂಗ ಅನುಭವಿಸಿರುವ ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ (England Cricket Team), ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಇದೀಗ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲೇ ನಿಧಾನಗತಿಯ ಬೌಲಿಂಗ್‌ ಮಾಡಿದ ತಪ್ಪಿಗೆ ಇಂಗ್ಲೆಂಡ್ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯ 100% ದಂಡ ವಿಧಿಸಿದೆ. ಇದಷ್ಟೇ ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 5 ಅಂಕಗಳನ್ನು ಕಡಿತ ಮಾಡಿದೆ

ಇನ್ನು ಇದೇ ವೇಳೆ ಮೈದಾನದಲ್ಲಿ ಅಸಭ್ಯ ಪದ ಬಳಕೆ ಮಾಡಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (Travis Head) ಅವರಿಗೆ ಪಂದ್ಯದ ಸಂಭಾವನೆಯ 15% ದಂಡ ವಿಧಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿದ್ದ ಡೇವಿಡ್‌ ಬೂನ್ (David Boon) ಈ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ. ನಿಗಧಿತ ಸಮಯಕ್ಕಿಂತ 5 ಓವರ್‌ ತಡವಾಗಿ ಬೌಲಿಂಗ್ ಮಾಡಿದ ತಪ್ಪಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ICC World Test Championship) ಅಂಕಗಳಲ್ಲಿ ಓವರ್‌ಗೆ ತಲಾ ಒಂದು ಅಂಕದಂತೆ 5 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಇನ್ನು ಆರ್ಟಿಕಲ್ 2.3 ಅನ್ವಯ ನೀತಿ ಸಂಹಿತೆ ಉಲ್ಲಂಘಿಸಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್‌ಗೂ ಐಸಿಸಿ ಬಿಸಿ ಮುಟ್ಟಿಸಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಸಭ್ಯ ಪದ ಬಳಸಿದ ತಪ್ಪಿಗೆ ಪಂದ್ಯದ ಸಂಭಾವನೆಯ 15% ದಂಡ ವಿಧಿಸಲಾಗಿದೆ. ಇದರ ಜತೆಗೆ ಒಂದು ಡೀಮೆರಿಟ್(ಋಣಾತ್ಮಕ ಅಂಕ) ಪಾಯಿಂಟ್ ಕೂಡಾ ನೀಡಲಾಗಿದೆ. ಮೊದಲ ಇನಿಂಗ್ಸ್‌ನ ಪಂದ್ಯದ 77ನೇ ಓವರ್‌ನಲ್ಲಿ  ಬೆನ್ ಸ್ಟೋಕ್ಸ್‌ ಅವರನ್ನು ಉದ್ದೇಶಿಸಿ ಬ್ಯಾಟಿಂಗ್ ಮಾಡುತ್ತಿದ್ದ ಹೆಡ್‌ ಅವಾಚ್ಯ ಬದ ಬಳಕೆ ಮಾಡಿದ್ದರು. ಇದು ಕ್ಯಾಮರಾ ವಿಡಿಯೋದಲ್ಲಿ ಸೆರೆಯಾಗಿತ್ತು.

ಮೊದಲ ಟೆಸ್ಟ್‌ನಲ್ಲಿ ಸುಲಭ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ..!

ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಬ್ರಿಸ್ಬೇನ್‌ನ ಗಾಬಾ ಮೈದಾನ ಆತಿಥ್ಯವನ್ನು ವಹಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಕೇವಲ 147 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮೊದಲ ದಿನವೇ ಆಸೀಸ್‌ ಮಾರಕ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ಪೆವಿಲಿಯನ್ ಪೆರೇಡ್ ನಡೆಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಡೇವಿಡ್ ವಾರ್ನರ್ ಆಕರ್ಷಕ ಶತಕವಂಚಿತ ಅರ್ಧಶತಕ ಹಾಗೂ ಟ್ರಾವಿಸ್ ಹೆಡ್ ಬಾರಿಸಿದ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 425 ರನ್‌ ಕಲೆಹಾಕಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 278 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.

Ashes Test: ನಾಲ್ಕನೇ ದಿನದಾಟದಲ್ಲಿ ಅಪರೂಪದ ದಾಖಲೆ ಬರೆದ ರೂಟ್‌, ಲಯನ್..!

ಇನ್ನು ಭಾರೀ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಆಸರೆಯಾದರು. ಆದರೆ ನಾಲ್ಕನೇ ದಿನದಾಟದಲ್ಲಿ ಮತ್ತೆ ನಾಟಕೀಯ ಕುಸಿತ ಕಂಡ ಇಂಗ್ಲೆಂಡ್, ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ 20 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಮೊದಲ ಇನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಬಾರಿಸಿದ ಟ್ರಾವಿಸ್ ಹೆಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ 5 ಪಂದ್ಯಗಳ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಇದೀಗ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ ಪಂದ್ಯವು ಡಿಸೆಂಬರ್ 16ರಿಂದ ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ಆರಂಭವಾಗಲಿದೆ.

Follow Us:
Download App:
  • android
  • ios