ಸಚಿನ್ ಪುತ್ರನಿಗೆ ಸಿಗುತ್ತಿಲ್ಲ ಅವಕಾಶ, ಮುಂಬೈ ತೊರೆದು ಗೋವಾ ಪರ ಆಡಲು ಸಜ್ಜಾದ ಅರ್ಜುನ್ ತೆಂಡುಲ್ಕರ್!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ಗೆ ಮುಂಬೈ ರಣಜಿ ತಂಡದಲ್ಲಿ ಅವಕಾಶವೇ ಸಿಗುತ್ತಿಲ್ಲ. 22ರ ಹರೆಯದ ಅರ್ಜುನ್ ಇನ್ನೂ ಕ್ರಿಕೆಟಿಗನಾಗಿ ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮುಂಬೈ ತೊರೆದು ಇದೀಗ ಗೋವಾ ಪರ ಆಡಲು ಅರ್ಜುನ್ ಮುಂದಾಗಿದ್ದಾರೆ.
ಮುಂಬೈ(ಆ.11): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ನಿರ್ಮಿಸಿದ ದಾಖಲೆ ಇನ್ನೂ ಹಾಗೇ ಇದೆ. 17ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡುಲ್ಕರ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ವಿದಾಯದ ಪಂದ್ಯದ ವರೆಗೆ ಸಚಿನ್‌ಗೆ ತಂಡದಲ್ಲಿ ಸ್ಥಾನವಿಲ್ಲ ಅನ್ನೋ ಆತಂಕ ಯಾವತ್ತೂ ಎದುರಾಗಿಲ್ಲ. ಇದಕ್ಕೆ ಕಾರಣ ಸಚಿನ್ ಬ್ಯಾಟಿಂಗ್. ಆದರೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕತೆ ಭಿನ್ನವಾಗಿದೆ. ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಅರ್ಹತಾ ಸುತ್ತು, ಆಯ್ಕೆ ಪಂದ್ಯಗಳಲ್ಲಿ ನೀರಸ ಪ್ರದರ್ಶನದಿಂದ ಅರ್ಜುನ್ ತೆಂಡುಲ್ಕರ್‌ಗೆ ಅವಕಾಶಗಳೇ ಸಿಗುತ್ತಿಲ್ಲ. ಹೀಗಾಗಿ ಅರ್ಜುನ್ ತೆಂಡುಲ್ಕರ್ ಮುಂಬೈ ತಂಡ ತೊರೆದು ಗೋವಾ ಪರ ಆಡಲು ಸಜ್ಜಾಗಿದ್ದಾರೆ. ಮುಂಬೈ ರಣಜಿ ತಂಡದಲ್ಲಿ ಅವಕಾಶ ಸಿಗದ ಕಾರಣ ಅರ್ಜುನ್ ತೆಂಡುಲ್ಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಈಗಾಗಲೇ ಮುಂಬೈ ಕ್ರಿಕೆಟ್ ಸಂಸ್ಥೆ ಬಳಿಕ ವರ್ಗಾವಣೆ ಪತ್ರಕ್ಕಾಗಿ(NOC) ಮನವಿ ಮಾಡಿದ್ದಾರೆ.
ಅರ್ಜುನ್ ತೆಂಡುಲ್ಕರ್ ಗೋವಾ ಪರ ಆಡುವ ಕುರಿತು ಗೋವಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ವಿಪುಲ್ ಫಡ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜುನ್ ತೆಂಡುಲ್ಕರ್ ಗೋವಾ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಗೋವಾ ಪರ ಆಡುವ ಉತ್ಸುಕತೆ ತೋರಿದ್ದಾರೆ. ಹಲವು ಕ್ರಿಕೆಟಿಗರು ಗೋವಾ ಪರ ಆಡಲು ಮನವಿ ಮಾಡಿದ್ದಾರೆ. ಎಲ್ಲರಂತೆ ಅರ್ಜುನ್ ತೆಂಡುಲ್ಕರ್ ಕೂಡ ಫಿಟ್ನೆಸ್ ಹಾಗೂ ಸ್ಕಿಲ್ ಟೆಸ್ಟ್ ಪರೀಕ್ಷೆ ಮಾಡಲಾಗುವುದು. ಇದರಲ್ಲಿ ಪಾಸ್ ಆದರೆ ಅರ್ಜುನ್ ತೆಂಡುಲ್ಕರ್ ಗೋವಾ ಪರ ಆಡಲು ಅನುಮತಿ ನೀಡಲಿದ್ದೇವೆ ಎಂದು ವಿಪುಲ್ ಫಡ್ಕೆ ಹೇಳಿದ್ದಾರೆ.
ರಕ್ಷಾಬಂಧನ ವಿಶೇಷ: ಸಹೋದರಿಯರಿಂದಲೇ ಸ್ಟಾರ್ ಪ್ಲೇಯರ್‌ಗಳಾದ ಐವರು ಕ್ರಿಕೆಟಿಗರು!
ಮುಂದಿನ ಆವೃತ್ತಿಯಿಂದ ಗೋವಾ ಪರ ಆಡುವುದಾಗಿ ಅರ್ಜುನ್ ತೆಂಡುಲ್ಕರ್ ಹೇಳಿದ್ದಾರೆ ಎಂದು ವಿಪುಲ್ ಫಡ್ಕೆ ಹೇಳಿದ್ದಾರೆ. ಕಳೆದ ಆವೃತ್ತಿಯಲ್ಲಿ ರಣಜಿ ಟ್ರೋಫಿ ಫೈನಲ್ ತಲುಪಿದ ಮುಂಬೈ ತಂಡದ ಭಾಗವಾಗಿದ್ದ ಅರ್ಜುನ್ ತೆಂಡುಲ್ಕರ್‌ಗೆ ಆಡೋ ಹನ್ನೊಂದರ ಬಳಗದಲ್ಲಿ ಅವಕಾಶವೇ ಸಿಗಲಿಲ್ಲ. ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದ ಅರ್ಜುನ್ ತೆಂಡುಲ್ಕರ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಿಲ್ಲ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ತೆಂಡುಲ್ಕರ್ ಖರೀದಿ ಮಾಡಿದರೂ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಮುಂಬೈ ಹಿರಿಯರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಅರ್ಜುನ್ ತೆಂಡುಲ್ಕರ್ ಆಡುವ ಅವಕಾಶವೇ ಸಿಕ್ಕಿಲ್ಲ.
ಯುವಕರಿಗೆ ಪ್ರೋತ್ಸಾಹ ಅಗತ್ಯ: ಸಚಿನ್ ಟಾಂಗ್
ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆ ಕುರಿತು ಪರ ವಿರೋಧ ಸೃಷ್ಟಿಯಾಗಿತ್ತು. ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್‌ರನ್ನು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದ್ದನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಸಚಿನ್ ಸಲಹೆಗಳು ತಮಗೆ ಹೇಗೆ ನೆರವಾಯಿತು ಎಂಬ ಬಗ್ಗೆ ಕೊಹ್ಲಿ ಹೇಳಿಕೆಯೊಂದನ್ನು ಹಂಚಿಕೊಂಡಿರುವ ಕ್ರಿಕೆಟ್ ದಿಗ್ಗಜ, ‘ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಈಚಿನ ದಿನಗಳಲ್ಲಿ ಯುವ ಪ್ರತಿಭೆಗಳ ಬಗ್ಗೆ ಜನರು ಆಡಿಕೊಳ್ಳುತ್ತಾರೆ. ಆದರೆ, ಅವರಿಗೆ ಸಲಹೆ ನೀಡಿ ಪ್ರೋತ್ಸಾಹಿಸುವುದಿಲ್ಲ’ ಎಂದು ಟೀಕಾಕಾರರಿಗೆ ಟಾಂಗ್ ನೀಡಿದ್ದರು.
ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾಕೆ ಸ್ಥಾನ ನೀಡಲಿಲ್ಲ ಗೊತ್ತಾ?