ಟಿ20 ವಿಶ್ವಕಪ್ ಸೆಮೀಸ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದ ಟೀಂ ಇಂಡಿಯಾಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿಭಿನ್ನ ತಂಡ ಹೊಂದಲು ಆಗ್ರಹ
ಬೆಂಗಳೂರು(ನ.14): ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೆಮೀಸ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ, ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಬೇರೆ ಬೇರೆ ತಂಡಗಳು ಇರುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ, "ಖಂಡಿತವಾಗಿಯೂ ಎರಡು ಬೇರೆ ಬೇರೆ ತಂಡಗಳು ಇರಬೇಕು. ಅದರಲ್ಲೂ ಟಿ20 ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರು ತಂಡದಲ್ಲಿರಬೇಕು" ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇನ್ನು ಇದೇ ವೇಳೆ ಟೀಂ ಇಂಡಿಯಾವು ಹೆಚ್ಚು ಆಲ್ರೌಂಡರ್‌ಗಳತ್ತ ಒತ್ತು ಕೊಡಬೇಕು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದಲ್ಲಿ ಕೆಳಕ್ರಮಾಂಕದವರೆಗೂ ಒಳ್ಳೆಯ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ ಎಂದು ಜಂಬೊ ಹೇಳಿದ್ದಾರೆ.
ನನ್ನ ಪ್ರಕಾರ ಭಾರತ ತಂಡವು ಆಲ್ರೌಂಡರ್‌ಗಳ ಹೊಂದುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಕೊಡಬೇಕಿದೆ. ಯಾಕೆಂದರೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದಲ್ಲಿ ಸಾಕಷ್ಟು ಗುಣಮಟ್ಟದ ಆಲ್ರೌಂಡರ್‌ಗಳಿದ್ದಾರೆ. ಅವರ ಬ್ಯಾಟಿಂಗ್ ಕ್ರಮಾಂಕವನ್ನು ಗಮನಿಸಿ, ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದರು. ಯಾವುದೇ ತಂಡವು 7ನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಆಲ್ರೌಂಡರ್ ಅನ್ನು ಹೊಂದಿಲ್ಲ. ಇನ್ನು ಆಸ್ಟ್ರೇಲಿಯಾ ತಂಡವು ಆರನೇ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋನಿಸ್ ಅವರಂತಹ ಆಲ್ರೌಂಡರ್ ಅನ್ನು ಹೊಂದಿದೆ. ಆ ರೀತಿಯ ತಂಡವನ್ನು ನಾವು ಕಟ್ಟಬೇಕಿದೆ. ಅದಕ್ಕಾಗಿ ನಾವು ಸಾಕಷ್ಟು ಗಮನ ಕೊಡಬೇಕಿದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇನ್ನು ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಬೇರೆ ಬೇರೆ ಕೋಚ್ ಹಾಗೂ ನಾಯಕರಿರಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅನಿಲ್ ಕುಂಬ್ಳೆ, ಸದ್ಯದ ಮಟ್ಟಿಗೆ ಅದರ ಅಗತ್ಯವಿಲ್ಲ, ಅದರೆ ತಂಡದ ಆಯ್ಕೆ ಸಾಕಷ್ಟು ಮಹತ್ವದ್ದೆನಿಸಿಕೊಳ್ಳಲಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಬೇರೆ ಬೇರೆ ಮಾದರಿಯ ಕ್ರಿಕೆಟ್‌ಗೆ ಬೇರೆ ಬೇರೆ ಕೋಚ್ ಅಥವಾ ನಾಯಕರಿರಬೇಕು ಎಂದು ನನಗನಿಸುತ್ತಿಲ್ಲ. ಆದರೆ ನೀವು ಯಾವ ರೀತಿ ತಂಡವನ್ನು ಆಯ್ಕೆ ಮಾಡುತ್ತೀರಾ ಎನ್ನುವುದು ಸಾಕಷ್ಟು ಮುಖ್ಯವಾಗುತ್ತದೆ. ಆಯ್ಕೆ ಮಾಡಿಕೊಂಡ ತಂಡವನ್ನು ಹೇಗೆ ಬೆಳೆಸುತ್ತೀರ ಎನ್ನುವುದು ಕೂಡಾ ಸಾಕಷ್ಟು ಮುಖ್ಯವಾಗುತ್ತದೆ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಈ ಮೊದಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ, ಎಲ್ಲಾ ತಂಡಗಳು ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಬೇರೆ ಬೇರೆ ನಾಯಕರನ್ನು ಹಾಗೂ ಕೋಚ್‌ಗಳನ್ನು ಹೊಂದುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದರು.
