ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ಫೈನಲ್ ಪ್ರವೇಶಿಸುವ ಕನಸು ಭಗ್ನಪಾಕಿಸ್ತಾನ ಎದುರು ಸೂಪರ್ 4 ಹಂತದಲ್ಲಿ ರೋಚಕ ಸೋಲು ಕಂಡ ಆಫ್ಘಾನಿಸ್ತಾನಸೋಲಿನ ಬೆನ್ನಲ್ಲೇ ಪಾಕಿಸ್ತಾನ ಅಭಿಮಾನಿಗಳ ಎದುರು ಆಕ್ರೋಶ ಹೊರಹಾಕಿದ ಆಫ್ಘಾನಿಸ್ತಾನ ಫ್ಯಾನ್ಸ್‌

ಶಾರ್ಜಾ(ಸೆ.08): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ವಿಕೆಟ್‌ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಕೊನೆಯ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಪಾಕಿಸ್ತಾನ ತಂಡವು ಜಯದ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ತಂಡವು ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ ಎನ್ನುವ ಆಸೆಗೆ ತಣ್ಣೀರೆರಚಿದಂತಾಗಿದ್ದು, ಆಫ್ಘಾನ್ ಅಭಿಮಾನಿಗಳ ಆಕ್ರೋಶಕ್ಕೆ ಶಾರ್ಜಾ ಮೈದಾನದ ಪೀಠೋಪಕರಣಗಳು ನುಚ್ಚುನೂರಗಿವೆ. ಇದು ತಾಲಿಬಾನ್ ಸಂಸ್ಕೃತಿಯನ್ನು ತೋರಿಸುತ್ತಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.

ಶಾರ್ಜಾ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ತಂಡವು ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ 9 ವಿಕೆಟ್‌ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ನಸೀಮ್ ಶಾ ಕೊನೆಯ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ರೋಚಕವಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ಕ್ರಿಕೆಟಿಗರು ತಮ್ಮ ಅಸಭ್ಯ ವರ್ತನೆ ತೋರುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಆಫ್ಘಾನಿಸ್ತಾನದ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಮೇಲೆ ಹೊರಹಾಕಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಕುರಿತಂತೆ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ಆಫ್ಘಾನ್‌ ಕ್ರಿಕೆಟ್ ಅಭಿಮಾನಿಗಳು ಈ ರೀತಿ ವರ್ತಿಸಿದ್ದಾರೆ. ಅವರೆಲ್ಲರೂ ಈ ಹಿಂದೆಯೂ ಹಲವಾರು ಬಾರಿ ಇದೇ ರೀತಿಯ ವರ್ತನೆಯನ್ನು ಮಾಡಿದ್ದಾರೆ. ಇದೊಂದು ಪಂದ್ಯವಷ್ಟೇ, ಇದನ್ನು ಒಳ್ಳೆಯ ರೀತಿಯಲ್ಲಿ ನೋಡಬೇಕು. ಕ್ರೀಡೆಯಲ್ಲಿ ನೀವು ಬೆಳೆಯಬೇಕಿದ್ದರೇ ನಿಮ್ಮ ಅಭಿಮಾನಿಗಳು ಹಾಗೂ ನಿಮ್ಮ ಆಟಗಾರರು ಕೆಲವೊಂದು ವಿಚಾರಗಳನ್ನು ಕಲಿತುಕೊಳ್ಳಬೇಕು ಎಂದು ಟ್ವೀಟ್ ಮೂಲಕ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶಫಿಕ್‌ ಸ್ಟಾನಿಕ್‌ಝೈಗೆ ಕಿವಿಮಾತು ಹೇಳಿದ್ದಾರೆ.

Scroll to load tweet…

ಈ ಮೊದಲು ಆಫ್ಘಾನಿಸ್ತಾನ ಕ್ರಿಕೆಟ್‌ ಅಭಿಮಾನಿಗಳು 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಆಫ್ಘಾನಿಸ್ತಾನ ತಂಡವು ಸೋಲು ಕಾಣುತ್ತಿದ್ದಂತೆಯೇ ಇದೇ ರೀತಿ ಕ್ರೀಡಾಸ್ಪೂರ್ತಿ ಮರೆತು ಅನುಚಿತ ವರ್ತನೆ ತೋರಿದ್ದನ್ನು ಸ್ಮರಿಸಬಹುದಾಗಿದೆ.

ಪಾಕ್‌ ಶಿಸ್ತುಬದ್ಧ ದಾಳಿ: ಆಫ್ಘಾನಿಸ್ತಾನದ ಅಗ್ರ ಕ್ರಮಾಂಕ ಸ್ಫೋಟಕ ಆಟಕ್ಕಿಳಿದರೂ ಪಾಕಿಸ್ತಾನಿ ಬೌಲರ್‌ಗಳು ನಿರಂತರವಾಗಿ ವಿಕೆಟ್‌ ಉರುಳಿಸುತ್ತಾ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಇಬ್ರಾಹಿಂ 35 ರನ್‌, ಹಜರತ್ತುಲ್ಲಾ 21 ರನ್‌ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ್ಯಾರೂ 20 ರನ್‌ ತಲುಪಲಿಲ್ಲ. ಪಾಕಿಸ್ತಾನ ಪರ ರೌಫ್‌ 2, ನಸೀಂ, ಹಸ್ನೈನ್‌, ನವಾಜ್‌, ಶದಾಬ್‌ ತಲಾ 1 ವಿಕೆಟ್‌ ಕಿತ್ತರು. ಮುಖ್ಯವಾಗಿ ಪಾಕ್‌ ಬೌಲರ್‌ಗಳು ಒಟ್ಟು 54 ಡಾಟ್‌ ಬಾಲ್‌ಗಳನ್ನು ಎಸೆದು ಆಫ್ಘನ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

PAK Vs AFG ಪಾಕಿಸ್ತಾನಕ್ಕೆ ರೋಚಕ ಗೆಲುವು, ಆಫ್ಘಾನ್ ಜೊತೆಗೆ ಭಾರತವೂ ಏಷ್ಯಾಕಪ್‌ನಿಂದ ಔಟ್!

ಇನ್ನು ಆಫ್ಘಾನಿಸ್ತಾನ ನೀಡಿದ್ದ 130 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ನಾಯಕ ಬಾಬರ್ ಅಜಂ ವಿಕೆಟ್ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕರ್ ಅಹಮದ್ ಹಾಗೂ ಶಾದಾಬ್ ಖಾನ್ 36 ರನ್ ಬಾರಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಆಸರೆಯಾದರು. ಇದರ ಹೊರತಾಗಿಯೂ ಪಾಕಿಸ್ತಾನ ತಂಡವು 118 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತು. ಕೊನೆಯಲ್ಲಿ ನಸೀಂ ಶಾ ಕೇವಲ 4 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 14 ರನ್ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಫೈನಲ್‌ಗೇರಿಸುವಲ್ಲಿ ಯಶಸ್ವಿಯಾದರು.

ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿವೆ. ಇದೇ ವೇಳೆ ಸೂಪರ್‌ 4 ಹಂತದಲ್ಲಿ ತಲಾ 2 ಪಂದ್ಯಗಳನ್ನು ಸೋತ ಭಾರತ ಹಾಗೂ ಆಫ್ಘಾನಿಸ್ತಾನ ಕ್ರಿಕೆಟ್ ತಂಡಗಳು ಅಧಿಕೃತವಾಗಿ ಏಷ್ಯಾಕಪ್ ಫೈನಲ್‌ ರೇಸ್‌ನಿಂದ ಹೊರಬಿದ್ದಿವೆ.