ನ್ಯೂಜಿಲೆಂಡ್ ಎದುರಿನ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಟಾರ್ ಆಲ್ರೌಂಡರ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಇದೀಗ ಪುಣೆಯಲ್ಲಿ ಅಕ್ಟೋಬರ್ 24ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಮಹತ್ವದ ಸೇರ್ಪಡೆಯಾಗಿದ್ದು, ತಮಿಳುನಾಡು ಮೂಲದ ಸ್ಟಾರ್ ಆಲ್ರೌಂಡರ್ ಭಾರತ ಕ್ರಿಕೆಟ್ ತಂಡ ಕೂಡಿಕೊಂಡಿದ್ದಾರೆ.
ಹೌದು, ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೆ ಭಾನುವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸೇರ್ಪಡೆಗೊಂಡಿದ್ದಾರೆ. 25 ವರ್ಷದ ವಾಷಿಂಗ್ಟನ್ ಸುಂದರ್ ಡೆಲ್ಲಿ ವಿರುದ್ಧ ರಣಜಿ ಪಂದ್ಯದಲ್ಲಿ ಶನಿವಾರ ತಮಿಳುನಾಡು ಪರ 152 ರನ್ ಸಿಡಿಸಿದ್ದರು. ಅವರು ಪಂದ್ಯದ ಬಳಿಕ ಪುಣೆಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಈ ವರೆಗೂ ಭಾರತ ಪರ 4 ಟೆಸ್ಟ್ ಆಡಿದ್ದಾರೆ.
ರಣಜಿ ಟ್ರೋಫಿ: ಕರ್ನಾಟಕದ ಸತತ 2ನೇ ಪಂದ್ಯ ಡ್ರಾ ಸಾಧ್ಯತೆ!
ವಾಷಿಗ್ಟಂನ್ ಸುಂದರ್ 2021ರಲ್ಲಿ ಭಾರತ ಪರ 4 ಟೆಸ್ಟ್ ಪಂದ್ಯವನ್ನಾಡಿದ್ದರು. ಈ ಪೈಕಿ ಬ್ರಿಸ್ಬೇನ್‌ನ ಗಾಬಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವಲ್ಲಿ ಸುಂದರ್ ಮಹತ್ವದ ಪಾತ್ರವನ್ನು ನಿಭಾಯಿಸಿದ್ದರು. ಇದಾದ ಬಳಿಕ ಭಾರತ ಟೆಸ್ಟ್ ಅಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಸುಂದರ್ ವಿಫಲವಾಗಿದ್ದರು.
ಇದೀಗ ವಾಷಿಂಗ್ಟನ್ ಸುಂದರ್ ಭಾರತ ತಂಡದ ಸೇರ್ಪಡೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಈಗಾಗಲೇ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಅಕ್ಷರ್ ಪಟೇಲ್ ಬೌಲಿಂಗ್ ಅಲ್ರೌಂಡರ್ ಆಗಿದ್ದಾರೆ.
ಸ್ಥಾನ ಉಳಿಸಿಕೊಂಡ ಕನ್ನಡಿಗ ಕೆ ಎಲ್ ರಾಹುಲ್: ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲೂ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ರಾಹುಲ್ ಪ್ರದರ್ಶನದ ಕುರಿತಂತೆ ನೆಟ್ಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೆಲ್ಲದರ ಹೊರತಾಗಿಯೂ ಕೆ ಎಲ್ ರಾಹುಲ್, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳಾ ಚುಟುಕು ವಿಶ್ವಕಪ್: ಹರಿಣಗಳನ್ನು ಮಣಿಸಿದ ಕಿವೀಸ್‌ಗೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ!
ನ್ಯೂಜಿಲೆಂಡ್ ಎದುರಿನ ಎರಡು& ಮೂರನೇ ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಜಸ್‌ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಧ್ರುವ್ ಜುರೆಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್, ವಾಷಿಂಗ್ಟನ್ ಸುಂದರ್.
ಚಿನ್ನಸ್ವಾಮಿಯಲ್ಲಿ ವೇಗಿ ಶಮಿ ಅಭ್ಯಾಸ ಆರಂಭ
ಬೆಂಗಳೂರು: ಗಾಯದಿಂದಾಗಿ ದೀರ್ಘಕಾಲದಿಂದ ಭಾರತ ತಂಡದಿಂದ ಹೊರಗುಳಿದಿರುವ ತಾರಾ ವೇಗಿ ಮೊಹಮದ್ ಶಮಿ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸ ನಡೆಸಿದರು. ಸುಮಾರು 1 ಗಂಟೆಗಳ ಕಾಲ ಶಮಿ ಅವರು ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಶಮಿ ಆಸ್ಟ್ರೇಲಿಯಾ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
