ನವದೆಹಲಿ(ಫೆ.27): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೆಲ್ಲದರ ನಡುವೆ ಇದೀಗ ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಭಾರತದಲ್ಲಿ ಐಪಿಎಲ್‌ ಆಯೋಜನೆಯ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.

ಸದ್ಯ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸರಣಿಯಲ್ಲಿ ಶೇ.50% ಪ್ರೇಕ್ಷಕರು ಮೈದಾನ ಪ್ರವೇಶಿ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಭಾರತದ ಚುಟುಕು ಕ್ರಿಕೆಟ್‌ ಹಬ್ಬ ಐಪಿಎಲ್‌ನಲ್ಲೂ ಮೈದಾನ ಪ್ರವೇಶಿಸಲು ಪ್ರೇಕ್ಷಕರಿಗೆ ಬಿಸಿಸಿಐ ಅನುವು ಮಾಡಿಕೊಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.ಕಳೆದ ಬಾರಿ ಯುಎಇನಲ್ಲಿ ಖಾಲಿ ಮೈದಾನದಲ್ಲಿ ಐಪಿಎಲ್‌ ಪಂದ್ಯಾಟಗಳು ನಡೆದಿದ್ದವು. ಇನ್ನು ಈ ಸಲ ಭಾರತದಲ್ಲೇ ಐಪಿಎಲ್‌ ಆಯೋಜಿಸಲು ಬಿಸಿಸಿಐ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಕರ್ನಾಟಕದ ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌..?

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸದಿದ್ದರೂ ಏಪ್ರಿಲ್‌ 10ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ ಎನ್ನಲಾಗಿದೆ. ಆಂಗ್ಲ ಸುದ್ದಿವಾಹಿನಿ ಇಂಡಿಯಾ ಟುಡೆ ವರದಿ ಪ್ರಕಾರ ಬಿಸಿಸಿಐ ದೇಶದ 5 ಪ್ರಮುಖ ಕ್ರೀಡಾಂಗಣಗಳಾದ ಚೆನ್ನೈ, ಕೋಲ್ಕತ, ಅಹಮದಾಬಾದ್‌, ಬೆಂಗಳೂರು, ಡೆಲ್ಲಿ ಹಾಗೂ ಮುಂಬೈ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಇಲ್ಲಿ  ಐಪಿಎಲ್‌ ಆಯೋಜಿಸಲು ಚಿಂತನೆ ನಡೆಸುತ್ತಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಲೇ ಆಫ್ ಪಂದ್ಯಗಳು:
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2021ನೇ ಸಾಲಿನ ಐಪಿಎಲ್‌ ಪಂದ್ಯಾವಳಿಗಳು ನಡೆಯಲಿವೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಪಿಂಕ್‌ ಬಾಲ್ ಟೆಸ್ಟ್ ಪಂದ್ಯಕ್ಕೆ ಅಹಮದಾಬಾದ್‌ನ ಈ ಐತಿಹಾಸಿಕ ಮೈದಾನ ಸಾಕ್ಷಿಯಾಗಿತ್ತು. ಎರಡನೇ ದಿನದಲ್ಲಿ ಮೂರನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೆ ಪಿಚ್‌ ಕುರಿತಂತೆ ಟೀಕೆಗಳು ವ್ಯಕ್ತವಾಗಿದ್ದವು.