ಆಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ರಸ್ತೆ ಅಪಘಾತದ ಬಳಿಕ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕಾಬೂಲ್(ಅ.06): 2020ನೇ ವರ್ಷದ ಕರಾಳ ಅಧ್ಯಾಯಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ಆಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ ಕೊನೆಯುಸಿರೆಳೆದಿದ್ದಾರೆ. ಆಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ನಜೀಬ್ ತರಕಾಯಿ(29 ವರ್ಷ) ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ದುರ್ದೈವಿ.
ನಜೀಬ್ ತರಕಾಯಿ ಕಳೆದ ವಾರಾಂತ್ಯದಲ್ಲಿ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಜೀವನ್ಮರಣದ ಹೋರಾಟ ನಡೆಸಿದ ನಜೀಬ್ ಕೊನೆಗೂ ಸಾವನ್ನು ಜಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಟ್ವೀಟ್ ಮೂಲಕ ಈ ಘಟನೆಯನ್ನು ಖಚಿತ ಪಡಿಸಿದೆ.
ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ಶನಿವಾರ(ಅಕ್ಟೋಬರ್ 02)ದಂದು ನಜೀಬ್ ಕಾರಿನಲ್ಲಿ ಅಪಘಾತಕ್ಕೆ ತುತ್ತಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿತ್ತು. ಎಸಿಬಿ ಮೂಲಗಳ ಪ್ರಕಾರ ನಜೀಬ್ ತರಕಾಯಿ ಅವರನ್ನು ಆರಂಭದಲ್ಲಿ ನಂಗಾರ್‌ಹಾರ್‌ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದಷ್ಟು ಬೇಗ ಕಾಬೂಲ್ ಇಲ್ಲವೇ ಅಗತ್ಯಬಿದ್ದರೆ ಹೊರ ದೇಶಕ್ಕೆ ಶಸ್ತ್ರ ಚಿಕಿತ್ಸೆಗೆ ಕಳಿಸಲು ಚಿಂತನೆ ನಡೆಸಲಾಗಿತ್ತು.
ಐಪಿಎಲ್ 2020: ಹಾಲಿ ಚಾಂಪಿಯನ್ ಮುಂಬೈಗೆ ರಾಜಸ್ಥಾನ ಟಕ್ಕರ್ ಕೊಡುತ್ತಾ?
ಈ ಆಘಾತಕಾರಿ ಸುದ್ದಿಗೆ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕಂಬನಿ ಮಿಡಿಯುತ್ತಿದೆ. ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಒಬ್ಬ ಒಳ್ಳೆಯ ಆರಂಭಿಕ ಬ್ಯಾಟ್ಸ್‌ಮನ್ ಅವರನ್ನು ಆಫ್ಘಾನಿಸ್ತಾನ ಕಳೆದುಕೊಂಡಿರುವುದು ದೊಡ್ಡ ನಷ್ಟ ಎಂದು ಆಫ್ಘಾನ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ.
ನಜೀಬ್ ತರಕಾಯಿ ಆಫ್ಘಾನಿಸ್ತಾನ ಪರ ಒಂದು ಏಕದಿನ ಹಾಗೂ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ನಜೀಬ್ 2014ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಾರ್ಚ್ 2017ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ನಜೀಬ್ 90 ರನ್ ಸಿಡಿಸಿದ್ದರು.
