ಅಬುಧಾಬಿ(ಫೆ.03): ಕ್ರಿಕೆಟ್‌ನಲ್ಲಿ ವಿಚಿತ್ರ ಪ್ರಸಂಗಗಳು ನಡೆಯತ್ತಲೇ ಇರುತ್ತವೆ. ಆದರೆ ಫೀಲ್ಡರ್‌ ಒಬ್ಬ ಆಟದ ಮಧ್ಯೆ ಜೆರ್ಸಿ ಬದಲಿಸಲು ಹೋಗಿ ಚೆಂಡನ್ನು ಬೌಂಡರಿಗೆ ಬಿಟ್ಟ ಪ್ರಸಂಗವನ್ನು ಅಭಿಮಾನಿಗಳು ಈ ಹಿಂದೆ ನೋಡಿರಲಿಲ್ಲ. ಅಂಥದ್ದೊಂದು ಪ್ರಸಂಗ ಅಬು ಧಾಬಿ ಟಿ10 ಪಂದ್ಯದಲ್ಲಿ ನಡೆದಿದೆ. 

ಯುಎಇ ತಂಡದ ಖ್ಯಾತ ಕ್ರಿಕೆಟಿಗ ರೋಹನ್‌ ಮುಸ್ತಾಫ, ಆಟದ ವೇಳೆ ಜೆರ್ಸಿ ಬದಲಿಸುವಾಗ ಚೆಂಡು ತಮ್ಮತ್ತ ಬರುವುದನ್ನು ಗಮಿನಿಸದೆ ಚೆಂಡನ್ನು ಬೌಂಡರಿಗೆ ಬಿಟ್ಟ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇಲ್ಲಿನ ಶೇಕ್‌ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಅಬುಧಾಬಿ ತಂಡವನ್ನು ಪ್ರತಿನಿಧಿಸುತ್ತಿದ್ದ ರೋಹನ್‌ ನಾರ್ಥನ್‌ ವಾರಿಯರ್ಸ್‌ ವಿರುದ್ದದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

ಮುಷ್ತಾಕ್ ಅಲಿ ಟ್ರೋಫಿ ಗೆಲುವನ್ನು ಕೊನೆಯುಸಿರೆಳೆದ ತಾಯಿಗೆ ಅರ್ಪಿಸಿದ ಅಶ್ವಿನ್‌..!

ನಿಕೋಲಸ್‌ ಪೂರನ್‌ ನೇತೃತ್ವದ ನಾರ್ಥನ್‌ ವಾರಿಯರ್ಸ್ ತಂಡ 124 ರನ್‌ಗಳ ಗುರಿ ಬೆನ್ನತ್ತಿತ್ತು. ಈ ವೇಳೆ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೋಹನ್ ಮುಷ್ತಾಫ ತಮ್ಮತ್ತ ಬಾಲ್‌ ಬರುವುದನ್ನು ಗಮನಿಸದೇ ಜೆರ್ಸಿ ಹಾಕಿಕೊಳ್ಳುತ್ತಿರುವಾಗ ಚೆಂಡು ಬೌಂಡರಿ ಗೆರೆ ದಾಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಯುನೈಟೆಡ್ ಅರಬ್ ಎಮಿರೇಟ್ಸ್‌ ಪರ 32 ವರ್ಷದ ರೋಹನ್‌ ಮುಸ್ತಾಫ 39  ಏಕದಿ, 43 ಟಿ20 ಪಂದ್ಯಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕ ಸಹಿತ 1500ಕ್ಕೂ ಅಧಿಕ ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.