ಕರಾಚಿ(ಜು.09): ಕೊರೋನಾ ವೈರಸ್ ಎನ್ನುವ ಹೆಮ್ಮಾರಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಬಲವಾದ ಪೆಟ್ಟನ್ನೇ ನೀಡಿದೆ. ಈ ಜಾಗತಿಕ ಪಿಡುಗಿನಿಂದಾಗಿ ಪಾಕ್‌ನ ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕರ ಬರ ಅನುಭವಿಸುತ್ತಿದೆ. ಸಂಕಷ್ಟದಲ್ಲಿರುವ ತಂಡಕ್ಕೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೆರವಿಗೆ ಧಾವಿಸಿ ಬಂದಿದ್ದಾರೆ,

ಹೌದು, ಪಿಸಿಬಿ ಹಾಲಿ ಪ್ರಾಯೋಜಕತ್ವದ ತಂಪು ಪಾನೀಯ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿದೆ. ಹೀಗಾಗಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಫ್ರಿದಿ ನೆರವಾಗಿದ್ದಾರೆ. ಇದೀಗ ಅಫ್ರಿದಿ ಫೌಂಡೇಶನ್‌ ಲೋಗೋ ಪಾಕ್ ಕ್ರಿಕೆಟಿಗರ ಕ್ರೀಡಾಪರಿಕರಗಳಲ್ಲಿ ರಾರಾಜಿಸಲಿದೆ.

ನಮ್ಮ ಫೌಂಡೇಶನ್ ಲೋಗೋ ಪಾಕಿಸ್ತಾನ ಆಟಗಾರರ ಕಿಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ, ಮುಂದಿನ ಪ್ರವಾಸದಲ್ಲಿ ನಮ್ಮ ಹುಡುಗರು ಭರವಸೆ ಕಳೆದುಕೊಳ್ಳದೇ ಚೆನ್ನಾಗಿ ಆಡಲಿ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.

ಕ್ಯಾಪ್ಟನ್ ಕೊಹ್ಲಿಗೆ ನೀರ್‌ ದೋಸೆ ಕೊಟ್ಟ ಶ್ರೇಯಸ್‌ ಅಯ್ಯರ್‌!

ಪಾಕಿಸ್ತಾನ ತಂಡವು ಸದ್ಯ ಮೂರು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲು ಇಂಗ್ಲೆಂಡ್‌ಗೆ ಬಂದಿಳಿದಿದೆ. ಅಭ್ಯಾಸ ಮಾಡುವ ವೇಳೆ ಆಟಗಾರರು ಯಾವುದೇ ಸ್ಪಾನ್ಸರ್ ಇಲ್ಲದೇ ಜೆರ್ಸಿ ತೊಟ್ಟು ಕಾಣಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. 
ಖ್ಯಾತ ತಂಪು ಪಾನೀಯ ಕಂಪನಿಯೊಂದಿಗಿನ ಒಪ್ಪಂದ ಮುಕ್ತಾಯವಾದ ಬಳಿಕ ಪಿಸಿಬಿ ಹೊಸ ಬಿಡ್ ಸಲ್ಲಿಸಲು ಆಹ್ವಾನಿಸಿತ್ತು. ಆದರೆ ಯಾವುದೇ ಕಂಪನಿ ಸ್ಪಾನ್ಸರ್‌ಶಿಪ್ ನೀಡಲು ಮುಂದೆ ಬಂದಿರಲಿಲ್ಲ.  

ಶಾಹಿದ್ ಅಫ್ರಿದಿ ಫೌಂಡೇಶನ್ ಈಗಾಗಲೇ ಹಲವು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ. ಅದರಲ್ಲೂ ಕೊರೋನಾ ವೈರಸ್ ಪಾಕಿಸ್ತಾನಕ್ಕೆ ವಕ್ಕರಿಸಿದ ನಂತರ ಅಫ್ರಿದಿ ದೇಶಾದ್ಯಂತ ಸುತ್ತಿ ಬಡಬಗ್ಗರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಹಂಚಿದ್ದಾರೆ.

ಅಫ್ರಿದಿ ಪಾಕಿಸ್ತಾನ ಪರ 27 ಟೆಸ್ಟ್, 398 ಏಕದಿನ ಹಾಗೂ 99 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾಗಿ ಹತ್ತು ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 500ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.