ಮುಂಬೈ(ಫೆ.13): ಭಾರತೀಯ ಕ್ರಿಕೆಟಿಗರ ಫಿಟ್ನೆಸ್‌ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಬಿಸಿಸಿಐ ಹೊಸ ಫಿಟ್ನೆಸ್‌ ಪರೀಕ್ಷೆ ಪರಿಚಯಿಸಿದ್ದು, ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟದ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್‌ ಸೇರಿ 6 ತಾರಾ ಆಟಗಾರರು ಅನುತ್ತೀರ್ಣರಾಗಿದ್ದಾರೆ.

ಉನ್ನತ ಮೂಲಗಳ ಪ್ರಕಾರ, ಇಂಗ್ಲೆಂಡ್‌ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡುವ ಸಲುವಾಗಿ ಸುಮಾರು 20 ಆಟಗಾರರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಸ್ಯಾಮ್ಸನ್‌, ಇಶಾನ್‌ ಕಿಶನ್‌, ನಿತೀಶ್‌ ರಾಣಾ, ರಾಹುಲ್‌ ತೆವಾಟಿಯಾ, ಸಿದ್ಧಾರ್ಥ್ ಕೌಲ್‌ ಹಾಗೂ ಜಯ್‌ದೇವ್‌ ಉನಾದ್ಕತ್‌ ಫೇಲಾಗಿದ್ದಾರೆ ಎನ್ನಲಾಗಿದೆ.

‘ಇದು ಹೊಸ ಮಾದರಿಯ ಪರೀಕ್ಷೆಯಾಗಿರುವ ಕಾರಣ ಮತ್ತೊಂದು ಅವಕಾಶ ನೀಡಲಾಗುತ್ತದೆ. 6 ಆಟಗಾರರು ಪರೀಕ್ಷೆಯಲ್ಲಿ ಪಾಸಾಗಿಲ್ಲ. ಕೆಲವರು ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಓಟ ಮುಗಿಸಿ ಉತ್ತೀರ್ಣರಾದರು. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುತ್ತಿರುವ ಆಟಗಾರರು ಹಾಗೂ ಕೆಲ ಆಟಗಾರರಿಗೆ ಈ ಬಾರಿ ವಿನಾಯಿತಿ ನೀಡಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಎಲ್ಲರೂ ಈ ಟೆಸ್ಟ್‌ನಲ್ಲಿ ಪಾಸಾದರಷ್ಟೇ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರಿಗೆ ಇನ್ನು ಕಠಿಣ ಫಿಟ್ನೆಸ್‌ ಪರೀಕ್ಷೆ..!

ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಹಾಗೂ ಸ್ಪಿನ್ನರ್‌ಗಳು ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟ ಮುಗಿಸಬೇಕು. ವೇಗದ ಬೌಲರ್‌ಗಳು 8 ನಿಮಿಷ 15 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸುವುದು ಹೊಸ ಫಿಟ್ನೆಸ್‌ ಪರೀಕ್ಷೆಯ ಮಾನದಂಡವಾಗಿದೆ.