Asianet Suvarna News Asianet Suvarna News

ಕರ್ನಾಟಕ ರಣಜಿಯಲ್ಲಿ 4 ಹೊಸ ಪ್ರತಿಭೆಗಳು!

ಬುಧವಾರ ಕೆಎಸ್‌ಸಿಎ 16 ಮಂದಿಯ ತಂಡ ಪ್ರಕಟಿಸಿದಾಗ ಹಲವರಿಗೆ ಅಚ್ಚರಿ ಕಾದಿತ್ತು. ಈ ವರೆಗೂ ನಿರಂತರವಾಗಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಲ ಆಟಗಾರರು ಪಟ್ಟಿಯಿಂದ ಹೊರಬಿದ್ದಿದ್ದರು. ಆದರೆ ಕೆಎಸ್‌ಸಿಎ ಕಿರಿಯರ ಲೀಗ್‌, ಡಿವಿಷನ್‌ಗಳಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ರೋಹಿತ್‌ ಕುಮಾರ್‌, ಶಶಿಕುಮಾರ್‌, ವಿಕೆಟ್‌ ಕೀಪರ್‌ ಸುಜಯ್‌ ಸತೇರಿ, ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕಿಶಾನ್ ಬೆದಾರೆಗೆ ಮೊದಲ ಬಾರಿಗೆ ಅವಕಾಶ ನೀಡಿದೆ.

4 new faces in Karnataka Ranji Trophy Cricket Squad kvn
Author
First Published Dec 29, 2023, 12:14 PM IST

- ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು(ಡಿ.29): ಸುಮಾರು ಒಂದು ದಶಕದಿಂದಲೂ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಬರ ಎದುರಿಸುತ್ತಿರುವ 8 ಬಾರಿ ಚಾಂಪಿಯನ್‌ ಕರ್ನಾಟಕ, ಈ ಬಾರಿ ಹೇಗಾದರೂ ಮಾಡಿ ಮತ್ತೊಮ್ಮೆ ಕಿರೀಟ ಮುಡಿಗೇರಿಸಬೇಕೆಂಬ ದೃಢ ನಿಶ್ಚಯ ಮಾಡಿಕೊಂಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮಾಡಿದ ಮೊದಲ ಕೆಲಸ ತಂಡದಲ್ಲಿ ಮೇಜರ್ ಸರ್ಜರಿ. ಜ.5ರಿಂದ ಆರಂಭಗೊಳ್ಳಲಿರುವ ಮುಂದಿನ ಋತುವಿನ ಟೂರ್ನಿಗೆ ಕೆಎಸ್‌ಸಿಎ ನಾಲ್ವರು ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದು, ದೇಸಿ ಕ್ರಿಕೆಟ್‌ನಲ್ಲಿ ಮಿಂಚಲು ವೇದಿಕೆ ಒದಗಿಸಿಕೊಟ್ಟಿದೆ.

ಬುಧವಾರ ಕೆಎಸ್‌ಸಿಎ 16 ಮಂದಿಯ ತಂಡ ಪ್ರಕಟಿಸಿದಾಗ ಹಲವರಿಗೆ ಅಚ್ಚರಿ ಕಾದಿತ್ತು. ಈ ವರೆಗೂ ನಿರಂತರವಾಗಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಲ ಆಟಗಾರರು ಪಟ್ಟಿಯಿಂದ ಹೊರಬಿದ್ದಿದ್ದರು. ಆದರೆ ಕೆಎಸ್‌ಸಿಎ ಕಿರಿಯರ ಲೀಗ್‌, ಡಿವಿಷನ್‌ಗಳಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ರೋಹಿತ್‌ ಕುಮಾರ್‌, ಶಶಿಕುಮಾರ್‌, ವಿಕೆಟ್‌ ಕೀಪರ್‌ ಸುಜಯ್‌ ಸತೇರಿ, ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕಿಶಾನ್ ಬೆದಾರೆಗೆ ಮೊದಲ ಬಾರಿಗೆ ಅವಕಾಶ ನೀಡಿದೆ.

ರೋಹಿತ್‌ಗೆ ಒಲಿದ ಅದೃಷ್ಟ

ಹುಬ್ಬಳ್ಳಿಯ 23 ವರ್ಷದ ರೋಹಿತ್‌ ಇದೇ ಮೊದಲ ಬಾರಿ ಕರ್ನಾಟಕ ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಎಡಗೈ ಆಫ್‌ ಸ್ಪಿನ್ನರ್‌ ಆಗಿರುವ ರೋಹಿತ್‌ ಈ ಮೊದಲು ಅವರು ಕರ್ನಾಟಕ ಅಂಡರ್‌-25 ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 10 ಪಂದ್ಯಗಳಲ್ಲಿ 60 ವಿಕೆಟ್‌ ಕಬಳಿಸಿ ಕೆಎಸ್‌ಸಿಎ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಅವರು ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಕಿರಿಯರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದರೆ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಭರವಸೆ 50-50 ಇತ್ತು. ಉತ್ತಮ ಕ್ರಿಕೆಟಿಗರು ತಂಡದಲ್ಲಿರುವ ಕಾರಣ ನನಗೆ ಅವಕಾಶ ಸಿಗಲು ವಿಳಂಬವಾಗುತ್ತೆ ಅಂದುಕೊಂಡಿದ್ದೆ. ಆದರೆ ತಂಡಕ್ಕೆ ಆಯ್ಕೆಯಾಗಿದ್ದು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ -ರೋಹಿತ್‌ ಕುಮಾರ್‌

ಶರತ್‌ ಬದಲು ಸುಜಯ್‌

ತಂಡದ ಪ್ರಮುಖ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿದ್ದ 27 ವರ್ಷದ ಬಿ.ಆರ್‌.ಶರತ್‌ಗೆ ಈ ಬಾರಿ ತಂಡದಲ್ಲಿ ಸ್ಥಾನವಿಲ್ಲ. ಅವರ ಜಾಗಕ್ಕೆ ಬೆಳಗಾವಿಯ ಸುಜಯ್‌ ಸತೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಮೊದಲ ಡಿವಿಷನ್‌ ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿರುವ 23 ವರ್ಷದ ಸುಜಯ್‌ಗೆ ಇದು ರಾಜ್ಯ ತಂಡಕ್ಕೆ ಮೊದಲ ಕರೆ. ಡಿವಿಷನ್‌ ಲೀಗ್‌ನಲ್ಲಿ ಅವರು 2022ರಲ್ಲಿ 8 ಪಂದ್ಯಗಳಲ್ಲಿ 550 ರನ್‌ ಕಲೆಹಾಕಿದ್ದ ಸುಜಯ್‌, 2023ರಲ್ಲಿ 10 ಪಂದ್ಯಗಳಲ್ಲಿ 700 ರನ್‌ ಸಿಡಿಸಿದ್ದಾರೆ. ಅವರು ಕೆಎಸ್‌ಸಿಎ ಲೀಗ್‌ಗಳಲ್ಲಿ ಅಗ್ರ ಸ್ಕೋರರ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.

ಟೀಕೆ ಮಾಡಿದವರೇ ಈಗ ಹೊಗಳುತ್ತಿದ್ದಾರೆ: ಕೆ ಎಲ್ ರಾಹುಲ್‌

ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಭರವಸೆ ಇತ್ತು. ಇದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಡಿವಿಷನ್‌ ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ರಣಜಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ಒಂದು ಗೌರವ. ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. -ಸುಜಯ್‌ ಸತೇರಿ

ಕಿಶನ್‌ಗೆ ಮತ್ತೆ ಅವಕಾಶ

ಮೈಸೂರಿನ ಕಿಶನ್‌ ಬೆದರೆ ಈ ಮೊದಲು 2022ರಲ್ಲಿ ರಾಜ್ಯ ರಣಜಿ ತಂಡಕ್ಕೆ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಅವಕಾಶ ಬಾಚಿಕೊಳ್ಳುವ ಕಾತರದಲ್ಲಿದ್ದಾರೆ. ಅವರು ಅಂಡರ್‌-25 ಟೂರ್ನಿಯಲ್ಲಿ 2022ರಲ್ಲಿ 4 ಪಂದ್ಯಗಳಲ್ಲಿ 2 ಶತಕ ಸೇರಿ 500 ರನ್‌ ಗಳಿಸಿದ್ದು, ಈ ವರ್ಷ 7 ಪಂದ್ಯಗಳಲ್ಲಿ 1 ಸೆಂಚುರಿ ಸಹಿತ 480 ರನ್‌ ಚಚ್ಚಿದ್ದಾರೆ. ಮೊದಲ ಡಿವಿಷನ್‌ನಲ್ಲೂ ಅವರ ದಾಖಲೆ ಉತ್ತಮವಾಗಿದ್ದು, 6 ಪಂದ್ಯಗಳಲ್ಲಿ 2 ಶತಕದೊಂದಿಗೆ 480 ರನ್‌ ಗಳಿಸಿದ್ದಾರೆ.

2022ರಲ್ಲಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಆಯ್ಕೆಯಾದಾಗ ಆಡುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡಿದ್ದು ಖುಷಿ ನೀಡಿದೆ. ಆಡುವ ಅವಕಾಶ ಸಿಗುವ ಭರವಸೆ ಇದೆ. ಕಠಿಣ ಅಭ್ಯಾಸದೊಂದಿಗೆ ರಾಜ್ಯ ತಂಡದಲ್ಲಿ ಹಲವು ಪಂದ್ಯಗಳನ್ನು ಆಡುವ ಬಯಕೆಯಿದೆ. -ಕಿಶನ್‌ ಬೆದರೆ

ಸ್ಪಿನ್ನರ್‌ ಶಶಿಗೂ ಚಾನ್ಸ್

ಈ ಬಾರಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಮತ್ತೋರ್ವ ಆಟಗಾರ ಆಫ್‌ ಸ್ಪಿನ್ನರ್‌ ಶಶಿಕುಮಾರ್‌. ಕಲಬುರಗಿಯ 21 ವರ್ಷದ ಶಶಿಕುಮಾರ್‌ ಕೆಎಸ್‌ಸಿಎ ಆಯೋಜಿಸುವ ಕಿರಿಯರ ಕೂಟಗಳಲ್ಲಿ ಮಿಂಚಿದ್ದು, ಹಿರಿಯರ ತಂಡದಲ್ಲೂ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.

ಬರೀ 9 ತಿಂಗಳಲ್ಲೇ 5 ಕೋಟಿಯ ಹೂಡಿಕೆಗೆ 27 ಕೋಟಿ ರಿಟರ್ನ್ಸ್ ಪಡೆದ ಸಚಿನ್‌ ತೆಂಡುಲ್ಕರ್!

ಗೌತಮ್‌, ಶರತ್‌ ಇಲ್ಲ: ನಿಕಿನ್‌ ಉಪನಾಯಕ!

2012ರಿಂದಲೂ ರಾಜ್ಯ ತಂಡದಲ್ಲಿರುವ ಕೆ.ಗೌತಮ್‌ ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ. ವಿಕೆಟ್ ಕೀಪರ್‌ ಬ್ಯಾಟರ್‌ ಬಿ.ಆರ್‌.ಶರತ್‌ಗೆ ಮತ್ತಷ್ಟು ಅವಕಾಶ ನೀಡಲು ಆಯ್ಕೆ ಸಮಿತಿ ಮನಸ್ಸು ಮಾಡಿಲ್ಲ. ಅವರೊಂದಿಗೆ ತಂಡದಿಂದ ಹೊರಬಿದ್ದ ಮತ್ತೋರ್ವ ಆಟಗಾರ ಜಗದೀಶ್‌ ಸುಚಿತ್‌. ಈ ನಡುವೆ ಮಯಾಂಕ್‌ ಅಗರ್‌ವಾಲ್‌ ಮುನ್ನಡೆಸಲಿರುವ ರಾಜ್ಯ ತಂಡಕ್ಕೆ 23 ವರ್ಷದ ನಿಕಿನ್‌ ಜೋಸ್‌ಗೆ ಉಪನಾಯಕತ್ವದ ಪಟ್ಟ ನೀಡಲಾಗಿದೆ. ಅವರು ಕಳೆದ ವರ್ಷವಷ್ಟೇ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, ಹಲವು ಹಿರಿಯರನ್ನು ಹಿಂದಿಕ್ಕಿ ಉಪನಾಯಕನ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯ ರಣಜಿ ತಂಡಕ್ಕೆ ಮಯಾಂಕ್‌ ನಾಯಕ

ಬೆಂಗಳೂರು: ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಕರ್ನಾಟಕವನ್ನು ಅನುಭವಿ ಮಯಾಂಕ್‌ ಅಗರ್‌ವಾಲ್‌ ಮುನ್ನಡೆಸಲಿದ್ದಾರೆ. ಬುಧವಾರ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ 16 ಆಟಗಾರರ ರಾಜ್ಯ ತಂಡ ಪ್ರಕಟಿಸಲಾಯಿತು. ಸಂಭಾವ್ಯರ ತಂಡದಲ್ಲಿದ್ದ ಕೆ.ಎಲ್‌.ರಾಹುಲ್‌ ಅಫ್ಘಾನಿಸ್ತಾನ, ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಆಡುವ ನಿರೀಕ್ಷೆಯಿರುವ ಕಾರಣ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ನಿಕಿನ್‌ ಜೋಸ್‌ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಕರ್ನಾಟಕ ಮೊದಲ ಪಂದ್ಯದಲ್ಲಿ ಜ.5ರಿಂದ ಪಂಜಾಬ್‌ ವಿರುದ್ಧ ಹುಬ್ಬಳ್ಳಿಯಲ್ಲಿ ಆಡಲಿದೆ.

ತಂಡ: ಮಯಾಂಕ್‌(ನಾಯಕ), ಸಮರ್ಥ್‌, ಪಡಿಕ್ಕಲ್‌, ನಿಕಿನ್‌, ಮನೀಶ್‌, ಶುಭಾಂಗ್‌, ಶರತ್‌ ಶ್ರೀನಿವಾಸ್‌, ವೈಶಾಕ್‌, ಕೌಶಿಕ್‌, ವಿದ್ವತ್‌, ಶಶಿಕುಮಾರ್‌, ಸುಜಯ್‌, ನಿಶ್ಚಲ್‌, ವೆಂಕಟೇಶ್‌, ಕಿಶನ್‌, ರೋಹಿತ್‌ ಕುಮಾರ್‌.
 

Follow Us:
Download App:
  • android
  • ios