ಹ್ಯಾಮಿಲ್ಟನ್(ಜ.29): ರೋಹಿತ್ ಶರ್ಮಾ(65) ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೂರನೇ ಟಿ20 ಪಂದ್ಯದಲ್ಲಿ 179 ರನ್ ಬಾರಿಸಿದ್ದು, ಕಿವೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ 9 ಓವರ್‌ಗಳಲ್ಲಿ 89 ರನ್ ಕಲೆಹಾಕಿತು. ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದ ರೋಹಿತ್ ಶರ್ಮಾ 3ನೇ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಂದಹಾಗೆ ಇದು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 20ನೇ ಅರ್ಧಶತಕವಾಗಿದೆ. ಅದರಲ್ಲೂ ವೇಗಿ ಬೆನ್ನೆಟ್ ಎಸೆದ ಪಂದ್ಯದಲ್ಲಿ ಆರನೇ ಓವರ್‌ನಲ್ಲಿ ಟೀಂ ಇಂಡಿಯಾ 27 ರನ್ ಬಾರಿಸಿತು. ಅದರಲ್ಲಿ ರೋಹಿತ್ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 26 ರನ್ ಸಿಡಿಸಿದರು. ಇನ್ನು ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ 27 ರನ್ ಬಾರಿಸಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್ ಒಪ್ಪಿಸಿದರು.

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ನಾಟಕೀಯ ಕುಸಿತ: ಒಂದು ಹಂತದಲ್ಲಿ 89 ರನ್‌ಗಳವರೆಗೂ ಒಂದೂ ವಿಕೆಟ್ ಕಳೆದು ಕೊಳ್ಳದೇ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದ್ದ ಟೀಂ ಇಂಡಿಯಾ ರಾಹುಲ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 7 ರನ್ ಅಂತರದಲ್ಲಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ದುಬೆ ಕೇವಲ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಬಳಿಕ ತಂಡದ ರನ್ ಗಳಿಕೆಗೆ ಅಲ್ಪ ಬ್ರೇಕ್ ಬಿದ್ದಿತು.  

ಆಸರೆಯಾದ ಶ್ರೇಯಸ್-ಕೊಹ್ಲಿ: 96 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ಕೊಹ್ಲಿ-ಶ್ರೇಯಸ್ ಅಯ್ಯರ್ 46 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ದರು. ಅಯ್ಯರ್ 17 ರನ್ ಬಾರಿಸಿದರೆ, ಕೊಹ್ಲಿ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 179/5

ರೋಹಿತ್ ಶರ್ಮಾ: 65

ಬೆನ್ನೆಟ್: 54/3

(* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)