ಚಿತ್ರದುರ್ಗ [ನ.05]:  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಜೈಲಿನಲ್ಲಿದ್ದಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿಸಿಕೊಂಡಿದ್ದರು. ಇದೀಗ ಶಿವಕುಮಾರ್‌ ಅವರು ಹೊರ ಬಂದಿದ್ದರಿಂದ ಅವರು ತೀವ್ರ ಅಸಮಾಧಾನದಲ್ಲಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಸ್ವಲ್ಪದಿನ ಡಿಕೆಶಿ ಜೈಲಿನಲ್ಲಿ ಇರ್ತಾರೆಂದು ಭಾವಿಸಿದ್ದ ಸಿದ್ದರಾಮಯ್ಯಗೆ ಆಘಾತವಾಗಿದೆ. ಹಾಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗೆ ತರಲು ಯೋಚಿಸುವವರು ಯಾರೂ ಇಲ್ಲ. ಬಿಎಸ್‌ವೈ ಹೆಸರಲ್ಲಿ ಹರಿಯಬಿಟ್ಟಿದ್ದು ಫೇಕ್‌ ಆಡಿಯೋ. ಪಕ್ಷದ ಹೈಕಮಾಂಡ್‌ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆಡಿಯೋ ಬಗ್ಗೆ ಹೈಕಮಾಂಡ್‌ ಕೂಡಾ ತನಿಖೆ ನಡೆಸುತ್ತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿದ್ದರಾಮಯ್ಯ ಬಿಜೆಪಿಯೊಳಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆಡಿಯೋ ವಿಚಾರದಲ್ಲಿ ಸವದಿ, ಬೊಮ್ಮಯಿ ಹೆಸರು ಹೇಳಿ ತಲೆಯಲ್ಲಿ ಹುಳ ಬಿಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಶ್ರೀರಾಮುಲು ಉತ್ತರಿಸಿದರು.

ನೆರೆಹಾವಳಿ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದ್ದು, ಪರಿಹಾರ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಉಸ್ತುವಾರಿ ಹೊತ್ತ ಸಚಿವರು ಪಾರದರ್ಶಕ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಬಂದಾಗಿನಿಂದ ರಾಜ್ಯದ ಜನ ಸಂತೋಷವಾಗಿದ್ದಾರೆ ಎಂದರು.

ಹಾಲಿ ಎದುರಾಗಿರುವ ಉಪ ಚುನಾವಣೆಗಳ ಕುರುಕ್ಷೇತ್ರ ಯುದ್ಧದಲ್ಲಿ ಚಾಣಕ್ಯ ತಂತ್ರ ತೋರಿಸ್ತೇವೆ. ಪ್ರತಿ ಪಕ್ಷದವರು ಏನೇ ಕಸರತ್ತು ಮಾಡಿದರೂ ಆಡಳಿತ ಸರ್ಕಾರದ ಪರವಾಗಿ ಜನರ ಒಲವಿರುತ್ತದೆ ಎಂದು ಶ್ರೀರಾಮುಲು ಹೇಳಿದರು.