ಚಳ್ಳಕೆರೆ: ಚೌಳೂರು ಬ್ಯಾರೇಜ್‌ಗೆ ಶಾಸಕ ರಘುಮೂರ್ತಿ ಬಾಗಿನ

ಭಾರಿ ಮಳೆಗೆ ತುಂಬಿದ ಚೌಳೂರು ಬ್ಯಾರೇಜ್‌| ಚಳ್ಳಕೆರೆ ತಾಲೂಕಿನ ಎಲ್ಲ ಭಾಗಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗುತ್ತಿದೆ| ರೈತರೂ ಸೇರಿ ಎಲ್ಲ ಸಮುದಾಯದಲ್ಲೂ ಸಂತಸ| 

MLA Raghumurthy Did Pooja in Chauluru Barrage in Challakere

ಚಳ್ಳಕೆರೆ[ಅ.30]: ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ತಾಲೂಕಿನ ಪರಶುರಾಮಪುರ ಹೋಬಳಿಯ ಚೌಳೂರು ಬ್ಯಾರೇಜ್‌ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ತುಂಬಿ ಹರಿದು ಕೋಡಿ ಬಿದ್ದಿದ್ದು, ಶಾಸಕ ಟಿ. ರಘುಮೂರ್ತಿ ಸೋಮವಾರ ಬ್ಯಾರೇಜ್‌ಗೆ ತೆರಳಿ ಬಾಗಿನ ಅರ್ಪಿಸಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ರಘುಮೂರ್ತಿ, ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ತಾಲೂಕಿನ ಎಲ್ಲ ಭಾಗಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗುತ್ತಿದ್ದು, ರೈತರೂ ಸೇರಿ ಎಲ್ಲ ಸಮುದಾಯದಲ್ಲೂ ಸಂತಸ ಮನೆ ಮಾಡಿದೆ. ತಡವಾಗಿ ಮಳೆ ಬಂದರೂ ಎಲ್ಲೆಡೆ ಸಂತೋಷವನ್ನುಂಟು ಮಾಡಲು ಈ ಮಳೆ ಯಶಸ್ವಿಯಾಗಿದೆ. ಆದರೆ, ಶೇಂಗಾ ಬೆಳೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲವೆಂಬ ಅಭಿಪ್ರಾಯ ರೈತರಲ್ಲಿದ್ದು, ಜನ, ಜಾನುವಾರುಗಳಿಗೆ ಮೇವು, ನೀರು ಕೊರತೆ ಇಲ್ಲದಂತೆ ಮಳೆ ಬಂದಿದ್ದು, ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಚಿಕ್ಕಮಧುರೆ, ಬೊಮ್ಮಸಮುದ್ರ ಗ್ರಾಮಗಳ ಕೆರೆ ಕೋಡಿ ಬಿದಿದ್ದು, ಚೌಳೂರು ಬ್ಯಾರೇಜ್‌ ಸೇರಿ ಒಟ್ಟು ಮೂರು ಕೆರೆಗಳು ಕೋಡಿ ಬಿದ್ದಂತಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೇ ನಾಗಭೂಷಣ್‌ ಮಾತನಾಡಿ, ಇತ್ತೀಚೆಗೆ ತಾಲೂಕಿನ ಎಲ್ಲೆಡೆ ದೇವಸ್ಥಾನಗಳಲ್ಲಿ ಭಕ್ತರು ದೇವರಿಗೆ ಭಕ್ತಿಯಿಂದ ನಮಸ್ಕರಿಸಿ ಮಳೆಗಾಗಿ ಪ್ರಾರ್ಥಿಸಿದ ಪ್ರಾರ್ಥನೆ ಯಶಸ್ವಿಯಾಗಿದೆ. ದೇವರು ಕಡೆಯ ಕ್ಷಣಗಳಲ್ಲಾದರೂ ವರನೀಡಿ ಇಡೀ ತಾಲೂಕನ್ನು ಹಸಿರುಮಯವನ್ನಾಗಿಸಿದ್ದಾನೆ. ಇತ್ತೀಚೆಗೆ ಬಿದ್ದ ಮಳೆ ಈ ನಾಡಿನ ಬರ ಸ್ಥಿತಿಯನ್ನು ಉತ್ತಮ ಪಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಚೌಳೂರು ಬಸವರಾಜು, ಚಿಕ್ಕಣ್ಣ, ನಾಗೇಶ್‌, ಚನ್ನಕೇಶವ, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ತಹಸೀಲ್ದಾರ್‌ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ರೋಷನ್‌ ಜಮೀರ್‌, ವೃತ್ತ ನಿರೀಕ್ಷಕ ಆನಂದ ಮತ್ತಿತರರಿದ್ದರು.
 

Latest Videos
Follow Us:
Download App:
  • android
  • ios