ಆರ್‌.ಸಂತೋಷ್‌ ಕೋಡಿಹಳ್ಳಿ

ಹಿರಿಯೂರು(ಅ.10): ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವೇದಾವತಿ ನದಿ ಪುನಶ್ಚೇತನಗೊಂಡ ಬೆನ್ನಲ್ಲೇ ಈಗ ಸುವರ್ಣಮುಖಿ ನದಿಯ ಹರಿವೂ ಶುರುವಾಗಿದ್ದು, ಈ ನದಿಪಾತ್ರಗಳಿಗೆ ಅಡ್ಡಲಾಗಿ ಕುಂದಲಗುರ, ಸಮುದ್ರದಹಳ್ಳಿ ಗ್ರಾಮಗಳ ಬಳಿ ನಿರ್ಮಿಸಲಾಗಿದ್ದ ಬೃಹತ್‌ ಬ್ಯಾರೇಜ್‌, ಚೆಕ್‌ಡ್ಯಾಂಗಳು ಭರ್ತಿಯಾಗಿವೆ.

ಹಲವು ವರ್ಷಗಳಿಂದ ನೀರಿನ ಹರಿವಿಲ್ಲದೇ ಬಹುತೇಕ ನಿಸ್ತೇಜಗೊಂಡು ಮರಳುಗಳ್ಳರ ಅಡ್ಡೆಯಾಗಿದ್ದ ಸುವರ್ಣಮುಖಿ ನದಿಯಲ್ಲೀಗ ಜೀವಜಲ ಉಕ್ಕಿ ಸುಮಾರು ಐದಾರು ಕಿ.ಮೀ. ಉದ್ದಕ್ಕೂ ನದಿ ಪಾತ್ರದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ರೈತರ ಸಂತಸಕ್ಕೆ ಪಾರವಿಲ್ಲದಂತಾಗಿದೆ.

ಸುವರ್ಣ ಮುಖಿಗೆ ಮರುಜೀವ:

ಶತಮಾನಗಳ ಇತಿಹಾಸವಿರುವ ಸುವರ್ಣಮುಖಿ ನದಿ ಮೊದಲೆಲ್ಲ ಪ್ರತಿ ಮಳೆಗಾಲದ ಸಣ್ಣ ಮಳೆಗೆ ಹರಿದು ತನ್ನ ಆರ್ದತೆ ಉಳಿಸಿಕೊಂಡು ಸುತ್ತಲಿನ ಜೀವವೈವಿಧ್ಯಗಳ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ, ಕಳೆದೊಂದು ದಶಕದ ಹಿಂದೆ ಮರಳು ಮಾಫಿಯಾದ ಕಣ್ಣಿಗೆ ಬಿದ್ದ ಈ ನದಿಯ ಒಡಲು ದಿನೇ ದಿನೇ ಬರಿದಾಗುತ್ತಲೇ ಹೋದುದ್ದರಿಂದ ಇಲ್ಲೊಂದು ನದಿ ಇತ್ತೆಂಬ ಕುರುಹೂ ಇಲ್ಲದಂತೆ ಬಂಜರಾಗಿ ಹೋಗಿತ್ತು. ಈ ಕಾರಣಕ್ಕೆ ನದಿಯ ನೀರಸೆಲೆ ನೆಚ್ಚಿ ಕಟ್ಟಿದ್ದ ತೋಟ ತುಡಿಕೆಗಳು ಕ್ರಮೇಣ ಒಣಗತೊಡಗಿ, ಅಂತರ್ಜಲ ಕೂಡ ಬರಿದಾದ ಪರಿಣಾಮ ಅಲ್ಪಾವಧಿ ಬೆಳೆಗೆ ಕೂಡ ನೀರಿಲ್ಲದ ರೈತರು ಒಕ್ಕಲುತನ ಕೈಬಿಟ್ಟು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೊಳವೆಬಾವಿಗಳಲ್ಲಿ ಉಕ್ಕುತ್ತಿದೆ ನೀರು:

ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್‌ಗಳ ನಿರ್ಮಿಸದಂತೆ ಆಂಧ್ರಪ್ರದೇಶದ ರೈತರು ತಂದಿದ್ದ ನ್ಯಾಯಾಲಯದ ತಡೆಯಾಜ್ಞೆ ಸುವರ್ಣಮುಖಿ ನದಿ ಪಾತ್ರದ ಕಾಮಗಾರಿಗಳಿಗೂ ಉರುಳಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ 0.3 ಟಿಎಂಸಿ ಅಲೋಕೇಷನ್‌ ಪಡೆದುಕೊಂಡು ತಾಂತ್ರಿಕ ತೊಡಕು ನಿವಾರಿಸಿ ತಡೆಯಾಜ್ಞೆ ತೆರವುಗೊಳಿಸಿದ ಮೇಲೆ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗಳಿಗೆ ಹಸಿರು ನಿಶಾನೆ ಸಿಕ್ಕಿತ್ತು. 2016ರಲ್ಲಿ ಆಗಿನ ಶಾಸಕರಾಗಿದ್ದ ಡಿ.ಸುಧಾಕರ್‌ ಕುಂದಲಗುರ ಬಳಿಯ ಚೆಕ್‌ಡ್ಯಾಂಗೆ ರು.5 ಕೋಟಿ, ಸಮುದ್ರದಹಳ್ಳಿ ಬಳಿಯ ಚೆಕ್‌ಡ್ಯಾಂ ರು.3 ಕೋಟಿ ಹಣವನ್ನು ಸಣ್ಣ ನೀರಾವರಿ ಇಲಾಖೆಯ ಅಡಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆ ನಂತರ ವರ್ಷ ಮುಗಿಯುವುದೊರಳಗಾಗಿ ಎರಡೂ ಚೆಕ್‌ಡ್ಯಾಂ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿತ್ತು. ಆ ನಂತರ ಬಿದ್ದ ಮಳೆ ನೀರಿಗೆ ನೀರು ಸಂಗ್ರಹವಾದರೂ ಈ ಬ್ಯಾರೇಜ್‌ ಗಳ ಅಸಲೀ ಸಂಗ್ರಹ ಸಾಮರ್ಥ್ಯ, ಬಹುಉಪಯೋಗಿ ಮಾನದಂಡಗಳ ಫಲಿಂತಾಶಗಳನ್ನು ಎದುರು ನೋಡಲು ದೊಡ್ಡ ಮಳೆಯ ಅವಶ್ಯಕತೆಯಿತ್ತು. ಈಗ ಹಸ್ತ-ಚಿತ್ತ ಜೋಡಿ ಮಳೆಯು ಸುವರ್ಣಮುಖಿ ನದಿಯ ಮರುಜನ್ಮಕ್ಕೆ ಮುನ್ನುಡಿ ಬರೆದಿದ್ದು, ಈಗಾಗಲೇ ಬತ್ತಿರುವ ಕೊಳವೆ ಬಾವಿಗಳಲ್ಲಿ ನೀರು ಕೊಸರಿಕೊಂಡು ಉಕ್ಕುತ್ತಿರುವ ಮಾಹಿತಿಗಳು ಹೊರಬಿದ್ದಿವೆ. ಬರಡಾಗಿ ಬಂಜರಾಗಿದ್ದ ಸುವರ್ಣಮುಖಿಯ ಮಡಿಲ ತುಂಬ ಈಗ ಜೀವವೈವಿಧ್ಯದ ಜೀವಪಸೆ ಮೈದಳೆದಿದ್ದು, ಭವಿಷ್ಯದಲ್ಲಿ ವೇದಾವತಿಯ ಗತವೈಭವ ಮರುಕಳಿಸುವ ಸ್ಪಷ್ಟಕುರುಹು ಗೋಚರವಾಗಿದ್ದು, ಜನ, ಜಾನುವಾರು, ರೈತರಿಗೆ ಹೋದ ಜೀವ ಬಂದಂತಾಗಿದೆ.

ವಿವಿ ಸಾಗರಕ್ಕೆ ನಾಲ್ಕೂವರೆ ಅಡಿ ನೀರು:

ಕಳೆದ 15 ದಿನಗಳಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಒಳ ಹರಿವು ನಿರಂತರವಾಗಿರುವುದರಿಂದ ನಾಲ್ಕೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ ಎಂದು ವಿವಿ ಸಾಗರ ಜಲಾಶಯ ನಿರ್ವಹಣೆಯ ಉಸ್ತುವಾರಿ ಎಇಇ ದರ್ಶನ್‌ ಮಾಹಿತಿ ನೀಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ 62 ಅಡಿಗಳಷ್ಟಿದ್ದ ನೀರಿನ ಸಂಗ್ರಹ ಈಗ 66.8 ಅಡಿಗೆ ಏರಿಕೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.