Asianet Suvarna News Asianet Suvarna News

ಚಿತ್ರದುರ್ಗದ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ: ನ್ಯಾಯಾಧೀಶ ಡಾ.ಕೆ ಗಿರೀಶ್ ದಿಢೀರ್ ಭೇಟಿ

* ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶ ಡಾ.ಕೆ ಗಿರೀಶ್ ಭೇಟಿ ನೀಡಿ ಪರಿಶೀಲನೆ
* ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ನ್ಯಾಯಾಧೀಶರಿಂದ ಫುಲ್ ಕ್ಲಾಸ್
* ರೋಗಿಗಳಿಗೆ ಹೊರಗಡೆ ಔಷಧಿ ಬರೆದುಕೊಟ್ಟರೆ, ಆಸ್ಪತ್ರೆಯಿಂದ ಹಣ ಮರುಪಾವತಿಸಿ

Chitradurga district hospital is a mess Judge Dr K Girish took the officers to task
Author
First Published Dec 1, 2022, 4:28 PM IST

ವರದಿ: ಕಿರಣ್ಎಲ್‌ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.1) : ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ಅವಶ್ಯಕವಾದ ಔಷಧಿ ಹೊರಗಡೆಯಿಂದ ತರಲು ವೈದ್ಯರು ಶಿಫಾರಸು ಮಾಡಿದಲ್ಲಿ, ಔಷಧಿಯ ಹಣ ಮರು ಪಾವತಿಯನ್ನು ಸರ್ಕಾರಿ ಆಸ್ಪತ್ರೆಯಿಂದಲೇ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಡಾ.ಕೆ. ಗೀರಿಶ್ ಜಿಲ್ಲಾ ಸರ್ಜನ್ ಬಸವರಾಜ್ ಅವರಿಗೆ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಗೆ ಹೊರಗಡೆಯಿಂದ ಔಷಧಿ ತರುವಂತೆ ಚೀಟಿ ಬರೆದು ಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಇಂದು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಾಧೀಶ ಗೀರಿಶ್ ಅವರು, ಜನರ ಅರೋಗ್ಯ ಕಾಪಾಡಲು ಸರ್ಕಾರ ಕೋಟ್ಯಾಂತರ ರೂ.ಗಳನ್ನು ಹಣ ಖರ್ಚು ಮಾಡುತ್ತಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಬೇಕಾದ ಔಷಧಿಗಳನ್ನು ಖರೀದಿ ಮಾಡಬಹುದು. ಅದನ್ನು ಬಿಟ್ಟು ಹೊರಗಡೆಯಿಂದ ಔಷಧಿ ತರಿಸಿದರೆ ಹೇಗೆ ? ಅಲ್ಲದೆ ಸರ್ಕಾರದ ಸುತ್ತೋಲೆ ಪ್ರಕಾರ ಹೊರಗಡೆ ಔಷಧಿ ಖರೀದಿ ಮಾಡಿದರೆ ಅದರ ಹಣವನ್ನು ಸರ್ಕಾರಿ ಆಸ್ಪತ್ರೆಯೇ ಭರಿಸಬೇಕು ಎಂದು ಹೇಳುತ್ತದೆ. ಆದರೆ, ಸುತ್ತೋಲೆಯಲ್ಲಿರುವ ಕೆಲಸವನ್ನು ಆಸ್ಪತ್ರೆಯಲ್ಲಿನ ಸಿಬ್ಬಂದಿ ಮಾಡುತ್ತಿದ್ದ ಎಂದು ಜಿಲ್ಲಾ ಸರ್ಜನ್ ಅವರ ನಡೆಯ ಬಗ್ಗೆ ಕಿಡಿಕಾರಿದರು.

Uttarakannada: ನ್ಯಾಯಾಧೀಶೆಯಿಂದ ವೃದ್ಧೆಯ ರಕ್ಷಣೆ, ಸಂಬಂಧಿಕರಿಗೆ ಭರ್ಜರಿ ಕ್ಲಾಸ್

ಆಸ್ಪತ್ರೆಗೆ ಬರುವ ಸಾರ್ವಜನಿಕರು ಕೂಲಡೇ ಎಚ್ಚೆತ್ತುಕೊಂಡು ಯಾವ ವೈದ್ಯರು ಹೊರಗಡೆಯಿಂದ ಔಷಧಿ ತರಲು ಸೂಚಿಸುತ್ತಾರೋ ಅವರ ಹೆಸರು ಹಾಗೂ ಔಷಧಿಯ ರಶೀದಿಯನ್ನು ಜಿಲ್ಲಾ ಆಸ್ಪತ್ರೆಯ ಸರ್ಜನ್ ಗೆ ನೀಡಿ ಔಷಧಿಗಾಗಿ ಕೊಟ್ಟಿರುವ ಹಣವನ್ನು ವಾಪಸ್ಸು ಪಡೆಯಬೇಕು. ಆಸ್ಪತ್ರೆಯಲ್ಲಿರುವ ಎಲ್ಲ ವಿಭಾಗಗಳ ಮುಂದೆ ಸಂಬಂಧಪಟ್ಟ ವೈದ್ಯೆರು ಮತ್ತು ವಿಭಾಗಗಳ ನಾಮಫಲಕ ಹಾಕಬೇಕು. ಎಲ್ಲಾ ರೋಗಿಗಳಿಗೆ ಸೊಳ್ಳೆಪರದೆ, ಬೆಡ್ ಶೀಟ್ ವಿತರಣೆ ಮಾಡಬೇಕು. ಶುಚಿತ್ವ ಇಲ್ಲದ ಶೌಚಾಲಯವನ್ನು ಕೂಡಲೇ ಸ್ವಚ್ಛಗೊಳಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೋಟೀಸ್ ನೀಡುವಂತೆ ತಿಳಿಸಿದರು.

ದಿನಕ್ಕೆ 48 ಎಂಆರ್ ಐ  ಸ್ಕ್ಯಾನ್‌ ಮಾಡಿ: ಎಂಆರ್‌ಐ ಸ್ಕ್ಯಾನ್ ಸೆಂಟರ್ ಗೆ ಭೇಟಿ ನೀಡಿ ವಿಚಾರಿಸಿದಾಗ, ಕನಿಷ್ಠ 30 ನಿಮಿಷಕ್ಕೆ ಒಂದು ಎಂಆರ್‌ಐ ಸ್ಕ್ಯಾನ್ ಮಾಡುವುದಾಗಿ ಅಲ್ಲಿ ಸಿಬ್ಬಂದಿ ತಿಳಿಸಿದ್ದಾರೆ. ಅದರಂತೆ ಒಂದು ದಿನಕ್ಕೆ 48 ಸ್ಕ್ಯಾನ್ ಮಾಡಬಹುದಾಗಿದೆ. ಆದರೂ ನೀವು ಯಾಕೆ ಇಷ್ಟೊಂದು ಸ್ಕ್ಯಾನ್‌ಗಳನ್ನು ಮಾಡುತ್ತಿಲ್ಲ. ಮುಂದಿನ ದಿನಗಳಿಂದ ಪೂರ್ಣ ಪ್ರಮಾಣದಲ್ಲಿ ಸ್ಕ್ಯಾನ್‌ ಯಂತ್ರ ಬಳಸಿಕೊಳ್ಳಬೇಕು. ಈ ಆಸ್ಪತ್ರೆಗೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೂಡಲೇ ಮತ್ತೊಂದು ಎಂಆರ್‌ಐ ಸ್ಕ್ಯಾನ್ ಸೆಂಟರ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಬಿಪಿಎಲ್‌ ಕಾರ್ಡುದಾರರಿಗೆ ಆಂಬುಲೆನ್ಸ್ ಸೇವೆ ಉಚಿತ: ಜಿಲ್ಲಾ ಆಸ್ಪತ್ರೆಯಲ್ಲಿ 5 ಆಂಬುಲೆನ್ಸ್‌ಗಳಿದ್ದು, ಅವುಗಳನ್ನು ಆಸ್ಪತ್ರೆಯ ಎದುರುಗಡೆ ನಿಲ್ಲಿಸಬೇಕು. ಆಗ ಜನರಿಗೆ ಆಂಬುಲೆನ್ಸ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ತಿಳಿಯುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಆಂಬುಲೆನ್ಸ್ ಉಚಿತ ಆರೋಗ್ಯ ಸೇವೆ ಇದ್ದು, ಕಾರ್ಡು ಇಲ್ಲದವರು ಪ್ರತಿ ಕಿ.ಮೀ. ಗೆ ೧೦ ರೂ. ಹಣ ನೀಡಬೇಕಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Follow Us:
Download App:
  • android
  • ios