* ಯುಪಿಎಸ್ಸಿಯಲ್ಲಿ ದೇಶಕ್ಕೆ 235ನೆಯ ರಾರ‍ಯಂಕ್‌ ಪಡೆದ ಹುಬ್ಬಳ್ಳಿ ಹುಡುಗ* ಓದಿದ್ದು ಎಂಜಿನಿಯರಿಂಗ್‌; ಪರೀಕ್ಷೆ ಬರೆದಿದ್ದು ಕನ್ನಡ ಸಾಹಿತ್ಯ* ಯುಪಿಎಸ್ಸಿಯಲ್ಲಿ 5ನೆಯ ಬಾರಿ ಯಶಸ್ಸು ಕಂಡ ಶ್ರೀನಿವಾಸ 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಸೆ.25): ತಂದೆ ಸಿವಿಲ್‌ ಸರ್ವಿಸ್‌ ಸೇರಬೇಕೆಂದು ಕನಸು ಕಂಡು ಪ್ರಯತ್ನ ಪಟ್ಟರು. ಆದರೆ ಸಾಧ್ಯವಾಗಲಿಲ್ಲ. ಮಗ ಯುಪಿಎಸ್ಸಿಯಲ್ಲಿ(UPSC) ಪಾಸಾಗಿ ತಂದೆ ಕನಸು ನನಸು ಮಾಡಿದ!

ಇದು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 235ನೆಯ ರ‍್ಯಾಂಕ್‌ ಪಡೆದು ತೇರ್ಗಡೆಯಾದ ಹುಬ್ಬಳ್ಳಿಯ(Hubballi) ಎಂ.ಪಿ. ಶ್ರೀನಿವಾಸ್‌ ಬಗ್ಗೆ ಒಂದು ಸಾಲಿನ ವಿವರಣೆ. ಇಲ್ಲಿನ ಕೇಶ್ವಾಪುರದ ಸುಳ್ಳ ರಸ್ತೆಯ ನಿವಾಸಿ ಎಂ.ಪಿ. ಶ್ರೀನಿವಾಸ್‌ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇವರ ತಂದೆ ಎಂ.ಪಿ. ಪ್ರಸನ್ನ ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೆಬೆನ್ನೂರಿನವರು. ರೈಲ್ವೆ ಇಲಾಖೆಯಲ್ಲಿ ಎಕ್ಸ್‌ಪ್ರೆಸ್‌ ಗಾರ್ಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸನ್ನ ಅವರು ರೈಲ್ವೆ ಇಲಾಖೆ ಸೇರಿದ ಮೇಲೂ ಸಿವಿಲ್‌ ಸರ್ವಿಸ್‌ಗೆ ಹೋಗಬೇಕೆಂದು ಪ್ರಯತ್ನಪಟ್ಟಿದ್ದರು. ಪರೀಕ್ಷೆಯಲ್ಲಿ(Exam) ಯಶಸ್ಸು ಕಂಡಿರಲಿಲ್ಲ. ತಾನು ಮಾಡದ್ದನ್ನು ಮಗನಾದರೂ ಮಾಡಲಿ ಎಂಬ ಆಸೆಯಿಂದ ಸಣ್ಣ ವಯಸ್ಸಿನಿಂದಲೇ ಸಿವಿಲ್‌ ಸರ್ವಿಸ್‌ ಬಗ್ಗೆ ಮಗನಿಗೆ ಮಾಹಿತಿ ನೀಡುತ್ತಾ ಬಂದವರು ಪ್ರಸನ್ನ. ನೀನಾದರೂ ಪಾಸಾಗು ಎಂದು ಹುರಿದುಂಬಿಸುತ್ತಿದ್ದರು. ತಂದೆಯ ಆಸೆಯಂತೆ ಪುತ್ರ ಶ್ರೀನಿವಾಸ್‌ ಐದನೆಯ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ 235ನೆಯ ರ‍್ಯಾಂಕ್‌ನಲ್ಲಿ ಪಾಸಾಗಿದ್ದಾರೆ. ಈ ಮೂಲಕ ತಂದೆ ಕನಸು ನನಸು ಮಾಡಿದ್ದಾರೆ.

ಓದಿದ್ದೆಲ್ಲ ಹುಬ್ಬಳ್ಳಿಯಲ್ಲೇ:

ಮೂಲತಃ ಮಲೆಬೆನ್ನೂರಿನವರಾದರೂ ಹುಟ್ಟಿ ಬೆಳೆದಿರುವುದೆಲ್ಲ ಹುಬ್ಬಳ್ಳಿಯಲ್ಲೇ. ಇವರ ತಂದೆ ಕೆಲಸದ ಕಾರಣದಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಇಲ್ಲಿನ ಚಿನ್ಮಯ ಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದಲ್ಲಿ 1ರಿಂದ 10ನೆಯ ತರಗತಿವರೆಗೂ ಓದಿರುವ ಶ್ರೀನಿವಾಸ್‌, ಹೈದ್ರಾಬಾದ್‌ನ(Hyderabad) ನಾರಾಯಣ ಕಾಲೇಜ್‌ನಲ್ಲಿ ಪಿಯುಸಿ, ಬೆಂಗಳೂರಿನ ಆರ್‌.ವಿ. ಕಾಲೇಜ್‌ನಲ್ಲಿ ಎಂಜಿನಿಯರಿಂಗ್‌ (ಇನ್ಸ್‌ಟ್ರುಮೆಂಟೇಷನ್‌ ಟೆಕ್ನಾಲಜಿ) ಓದಿದ್ದಾರೆ. 2014ರಲ್ಲಿ ಎಂಜಿನಿಯರಿಂಗ್‌ ಮುಗಿಸಿ ಅಮೆರಿಕಾದಲ್ಲಿ ಎಂಎಸ್‌ (ಸಿಎಫ್‌ಆರ್‌ಎಂ) ಮಾಡಿದ್ದಾರೆ. ಬಳಿಕ ಅಲ್ಲೇ ಖಾಸಗಿ ಕಂಪನಿಯೊಂದರಲ್ಲಿ 1 ವರ್ಷ ಕೆಲಸ ಕೂಡ ಮಾಡಿದ್ದಾರೆ.

UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಬಳಿಕ ಸಣ್ಣ ವಯಸ್ಸಿನಿಂದ ಇದ್ದ ತಂದೆ ಕನಸನ್ನು ನನಸು ಮಾಡಬೇಕೆಂಬ ಇಚ್ಛೆಯಿಂದ ಭಾರತಕ್ಕೆ ಮರಳಿ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸಿದ್ದಾರೆ. ಎಂಜಿನಿಯರಿಂಗ್‌ ಓದಿರುವ ಶ್ರೀನಿವಾಸ್‌ ಮೊದಲಿಗೆ ಐಚ್ಛಿಕವಾಗಿ ಗಣಿತ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ ಕೂಡ ಪಾಸಾಗಿರಲಿಲ್ಲ. ಬಳಿಕ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಕಾಣಲಿಲ್ಲ. 3ನೆಯ ಸಲ ಮತ್ತೆ ಪ್ರಿಲಿಮ್ಸ್‌ನಲ್ಲೇ ವಿಫಲತೆ ಕಂಡರು. 4ನೆಯ ಸಲ ಸಂದರ್ಶನದಲ್ಲಿ ಫೇಲ್‌ ಆದರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಪ್ರಯತ್ನಿಸಿದರು. ಜತೆಗೆ ಗಣಿತ ವಿಷಯ ಐಚ್ಛಿಕವಾಗಿದ್ದನ್ನು ಕೈಬಿಟ್ಟು ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡು 5ನೆಯ ಬಾರಿಗೆ ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಎಂಜಿನಿಯರಿಂಗ್‌ ಓದಿದರೂ ಕನ್ನಡ ಸಾಹಿತ್ಯ ಬರೆದು ಯುಪಿಎಸ್ಸಿಯಲ್ಲಿ ಪಾಸಾಗಿರುವುದು ವಿಶೇಷ.

ಈ ಬಗ್ಗೆ ಕೇಳಿದರೆ, ನಾನು ಆಂಗ್ಲ ಭಾಷೆಯಲ್ಲೇ ವಿದ್ಯಾಭ್ಯಾಸ ಮಾಡಿದರೂ ಕನ್ನಡ(Kannada) ಭಾಷೆ ಬಗ್ಗೆ ಒಲವು ಜಾಸ್ತಿ. ಜತೆಗೆ ನಮ್ಮ ಅಜ್ಜ ಕನ್ನಡ ಶಿಕ್ಷಕ. ಹೀಗಾಗಿ ಕನ್ನಡ ಆಯ್ಕೆ ಮಾಡಿಕೊಂಡು ತಯಾರಿ ನಡೆಸಿದೆ. ಈ ಸಲ ಯಶಸ್ಸು ಕಂಡೆ ಎನ್ನುತ್ತಾರೆ.

ತರಬೇತಿ:

ಕನ್ನಡ ಭಾಷೆ ಬಗ್ಗೆ ನರಳ್ಳಿ ಬಾಲಸುಬ್ರಹ್ಮಣ್ಯ ಅವರ ಬಳಿ ತರಬೇತಿ ಪಡೆದಿದ್ದಾರೆ. ಉಳಿದಂತೆ ಬೆಂಗಳೂರಿನ ಇನ್‌ಸೈಟ್‌ ಆನ್‌ ಇಂಡಿಯಾ ಎಂಬ ಸಂಸ್ಥೆಯಲ್ಲಿ ಕೆಲಕಾಲ ತರಬೇತಿ ಪಡೆದಿದ್ದೇನೆ ಎಂದು ತಿಳಿಸುವ ಶ್ರೀನಿವಾಸ್‌, ಯುಪಿಎಸ್ಸಿ ಪರೀಕ್ಷೆಗೆ ಇಷ್ಟೇ ಗಂಟೆ ಅಧ್ಯಯನ ಮಾಡಬೇಕೆಂದೇನೂ ಇಲ್ಲ. ಆದರೆ ಪ್ರತಿಕ್ಷಣವೂ ಕಲಿಕೆ. ಅದನ್ನು ಅರಿತುಕೊಂಡೆ. 5ನೆಯ ಬಾರಿ ಯಶಸ್ಸು ಕಂಡೆ ಎಂದು ನುಡಿಯುತ್ತಾರೆ. ಒಟ್ಟಿನಲ್ಲಿ ತಂದೆ ಕನಸನ್ನು ಮಗ ನನಸು ಮಾಡಿದಂತಾಗಿದೆ. ಅಲ್ಲದೆ, ಕನ್ನಡ ಸಾಹಿತ್ಯದಲ್ಲಿ ಯುಪಿಎಸ್ಸಿಯಲ್ಲಿ ಪಾಸಾಗಿರುವುದು ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಿಕ್ಕಿಲ್ಲ.

ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!

ನನ್ನ ತಂದೆ, ದೊಡ್ಡಪ್ಪ ಇಬ್ಬರು ಸಿವಿಲ್‌ ಸರ್ವಿಸ್‌ನಲ್ಲಿ ಸೇರಬೇಕೆಂದು ಬಯಸಿ ಪ್ರಯತ್ನಿಸಿದ್ದರು. ಆದರೆ ಯಶಸ್ಸು ಕಂಡಿರಲಿಲ್ಲ. ಅದನ್ನು ನನಸು ಮಾಡಬೇಕೆಂಬ ಇಚ್ಛೆ ಇತ್ತು. ಹೀಗಾಗಿ 4 ಸಲ ವಿಫಲತೆ ಕಂಡರೂ ಮತ್ತೆ ಪ್ರಯತ್ನಿಸಿ ಪಾಸಾಗಿದ್ದೇನೆ. ನಮ್ಮ ತಂದೆ, ತಾಯಿ ಸೇರಿದಂತೆ ಕುಟುಂಬದ ಸದಸ್ಯರೇ ನನಗೆ ಪ್ರೇರಣೆ ಎಂದು ಎಂ.ಪಿ. ಶ್ರೀನಿವಾಸ್‌ ತಿಳಿಸಿದ್ದಾರೆ. 

ಯುಪಿಎಸ್ಸಿ ಪಾಸ್‌ ಮಾಡುತ್ತೇನೆ ಎಂದು ಹೇಳುತ್ತಿದ್ದ. ಅದನ್ನು ಮಾಡಿ ತೋರಿಸಿದ್ದಾನೆ. ಮಗನ ಸಾಧನೆ ಬಗ್ಗೆ ಹೆಮ್ಮೆಯಿದೆ. ಆತ ಪಾಸಾಗಿರುವುದು ಖುಷಿಯಾಗಿದೆ ಎಂದು ಶ್ರೀನಿವಾಸ ಅವರ ತಾಯಿ ಎಂ.ಪಿ. ಸಂಧ್ಯಾ ಹೇಳಿದ್ದಾರೆ.