6.83 ಲಕ್ಷ ಕ್ಕೂ ಅಧಿಕ ಹುದ್ದೆಗಳು ಖಾಲಿ: ಈ ಪೈಕಿ 1.34 ಲಕ್ಷಕ್ಕೂ ಹೆಚ್ಚು ನೇಮಕ
ದೇಶದ ಜಿಡಿಪಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಅದರಲ್ಲೂ ನಿರುದ್ಯೋಗ ಒಂದು ಪ್ರಮುಖ ಸಮಸ್ಯೆಯಾಗಿದೆ. ಆದ್ರೆ, ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ 6.83 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ನಿಯಮಗಳ ಪ್ರಕಾರದಂತೆ ಈ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ.
ನವದೆಹಲಿ, (ಫೆ.05): ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 6.83 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಲೋಕಸಭೆಗೆ ವರದಿ ನೀಡಿದೆ.
ಕೇಂದ್ರದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ವೆಚ್ಚ ಇಲಾಖೆಯ ಪಾವತಿ ಮತ್ತು ಸಂಶೋಧನಾ ಘಟಕದ ವಾರ್ಷಿಕ ವರದಿಯನ್ನು ಉಲ್ಲೇಖಿಸಿ ಇಂದು (ಬುಧವಾರ) ಲೋಕಸಭೆಗೆ ಲಿಖಿತ ಉತ್ತರವನ್ನು ನೀಡಿದರು.
ಪದವೀಧರರಿಗೆ ಕನಿಷ್ಠ 19 ಸಾವಿರ ರೂ. ವೇತನ: ಕೋರ್ಟ್ ಮಹತ್ವದ ಆದೇಶ
2018ರ ಮಾರ್ಚ್ 1ಕ್ಕೆ ಅನ್ವಯವಾಗುವ ಪ್ರಕಾರ 38,02,779 ಹುದ್ದೆಗಳು ಜಾರಿಯಾಗಿವೆ. ಇದಕ್ಕೆ ಪ್ರತಿಯಾಗಿ 31,18,956 ಹುದ್ದೆಗಳಷ್ಟೇ ಭರ್ತಿಯಾಗಿದ್ದು, 6,83,823 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ನಿವೃತ್ತಿ, ರಾಜೀನಾಮೆ, ಮರಣ, ಬಡ್ತಿ ಮತ್ತು ಇತರೆ ಕಾರಣಗಳಿಂದಾಗಿ ಇಷ್ಟು ಹುದ್ದೆಗಳು ಖಾಲಿಯಾಗಿದ್ದು, ನೇಮಕಾತಿ ನಿಯಮಗಳ ಪ್ರಕಾರ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಕರ್ನಾಟಕ ಸರ್ಕಾರ
2019-20ರ ಅವಧಿಯಲ್ಲಿ ಯುಪಿಎಸ್ಸಿ, ಎಸ್ಎಸ್ಸಿ, ಆರ್ಆರ್ಬಿಗಳು 1.34 ಲಕ್ಷ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, RRB ಗರಿಷ್ಠ 1,16,391 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ.
ಇನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 13,995 ಹಾಗೂ ಯುಪಿಎಸ್ಸಿ 4,399 ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಂಡಿವೆ. ಇದೇ ರೀತಿ ಅಂಚೆ ಸೇವೆ ಮಂಡಳಿ, ರಕ್ಷಣಾ ಸಚಿವಾಲಯ ಕೂಡ 3.39 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಂಡಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಕೊಟ್ಟ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.