Asianet Suvarna News Asianet Suvarna News

`ಕೊರೋನ ಹೆಸರಲ್ಲಿ ಕೊರಗದಿರೋಣ' ಎಂದರು ರಿಯಲ್ ಸ್ಟಾರ್

ಕ್ರಿಯಾಶೀಲ ವ್ಯಕ್ತಿಯಾಗಿರುವ ಉಪ್ಪಿ, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗಷ್ಟೇ ಕುಳಿತುಕೊಂಡು ಏನು ಮಾಡುತ್ತಿರಬಹುದು ಎನ್ನುವುದು ಎಲ್ಲರಿಗೂ ಕಾಡುವ ಸಹಜ ಸಂದೇಹ. ಮೂಲತಃ ಬರಹಗಾರರೂ ಆಗಿರುವ ಅವರು ಬರವಣಿಗೆಯ ಜತೆಯಲ್ಲಿ ಎಷ್ಟೆಲ್ಲ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದಾರೆ, ಮತ್ತು ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಅವರು ನಡೆಸಿರುವ ಅವಲೋಕನ ಏನು ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

 

Real star Upendras perspective about corona and lockdown
Author
Bangalore, First Published Apr 8, 2020, 7:23 PM IST

ಕನ್ನಡದಲ್ಲಿ ಸಿನಿಮಾರಂಗದಲ್ಲಿ ಸೃಜನ ಶೀಲರ ಪಟ್ಟಿಯನ್ನು ಯಾರೇ ಮಾಡಿದರೂ ಅದರಲ್ಲಿ ಉಪೇಂದ್ರ ಅವರ ಹೆಸರು ಖಂಡಿತವಾಗಿ ಇರಲೇಬೇಕು. ಸದ್ಯಕ್ಕೆ ಕೊರೋನಕ್ಕೆ ಕೊರೋಗ ಎನ್ನುವ ಹೊಸ ಹೆಸರನ್ನೇ ಇರಿಸಿಬಿಟ್ಟಿದ್ದಾರೆ! ಬಹುಶಃ ರೋಗದ ಕೊರಗಿನಲ್ಲಿಯೇ ಕಾಲ ಕಳೆಯಬೇಕಾಗಿದ ಬಂದಿರುವುದಕ್ಕೆ ಈ ಹೆಸರಿಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿರುವ ಉಪ್ಪಿ, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗಷ್ಟೇ ಕುಳಿತುಕೊಂಡು ಏನು ಮಾಡುತ್ತಿರಬಹುದು ಎನ್ನುವುದು ಎಲ್ಲರಿಗೂ ಕಾಡುವ ಸಹಜ ಸಂದೇಹ. ಮೂಲತಃ ಬರಹಗಾರರೂ ಆಗಿರುವ ಅವರು ಬರವಣಿಗೆಯ ಜತೆಯಲ್ಲಿ ಎಷ್ಟೆಲ್ಲ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದಾರೆ, ಮತ್ತು ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಅವರು ನಡೆಸಿರುವ ಅವಲೋಕನ ಏನು ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

-ಶಶಿಕರ ಪಾತೂರು

ಇತ್ತೀಚೆಗೆ ಎಲ್ಲರೂ ದೀಪ ಹಚ್ಚಿದರೆ, ನೀವು ಮಾತ್ರ ಮೆದುಳಿನಿಂದ ಪ್ರಕಾಶ ಹೊಮ್ಮುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲು ಕಾರಣವೇನು?
ಹೌದು! ನಾನು ಒಂದು ಮೆದುಳಿನ ಒಳಗಿನಿಂದ ಬೆಳಕಿನ ಕಿರಣ ಹರಡುವ ಚಿತ್ರ ಹಂಚಿದ್ದೆ. ಅದೇ ದೀಪ. ನೀವು ಏನೇ ದೀಪ ಹಚ್ಚಿದರೂ ಅದು  ಆರಲೇಬೇಕು. ಒಂದುವೇಳೆ  ಜ್ಞಾನದೀಪ ಹಚ್ಚಿದ್ದೇ ಆದರೆ ಅದು ಕೊನೆಯ ತನಕ ಆರುವುದೇ ಇಲ್ಲ. ಹಾಗಂತ ನಾನು ಆ ಮೂಲಕ ಯಾರಿಗೂ ದೀಪ ಹಚ್ಚಬೇಡಿ ಎನ್ನುವ ಸಂದೇಶ ನೀಡಿಲ್ಲ. ಯಾಕೆಂದರೆ ನಮ್ಮನೆಯವರು ಪ್ರಿಯಾ, ನಮ್ಮ ಮಕ್ಕಳು ಎಲ್ಲ ದೀಪ ಹಚ್ಚಿದ್ದಾರೆ. ದೀಪ ಬೆಳಗುವುದು ತಪ್ಪೇನಲ್ಲವಲ್ಲ? ಆದರೆ ಅದರ ಜತೆಯಲ್ಲೇ ಜ್ಞಾನದ ದೀವಿಗೆಯನ್ನು ವಿಚಾರಗಳ ಮೂಲಕ ನಿರಂತರವಾಗಿ ಬೆಳಗಿ ಎನ್ನುವುದಷ್ಟೇ ನನ್ನ ಸಂದೇಶ.  ಲಾಕ್ಡೌನ್ ಬಗ್ಗೆ ಹೇಳುವುದಾದರೆ ಈ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟಿಗೆ ಯಶಸ್ವಿಯಾಗಿ ನಿಯಂತ್ರಿಸಿರುವುದೇ ದೊಡ್ಡ ವಿಷಯ. ಆದರೆ ಕೆಲವರಿಗೆ ದಿಢೀರ್ ಲಾಕ್ಡೌನ್ ಆಗಿರುವುದು ಸಮಸ್ಯೆಯಾಗಿದ್ದರೆ, ದಿನಗೂಲಿ ಕಾರ್ಮಿಕರಿಗೆ ಲಾಕ್ಡೌನ್ ಕಾಲದಲ್ಲಿನ ಆಹಾರಕ್ಕೇನೇ ಸಮಸ್ಯೆಯಾಗಿದೆ. ಮೊನ್ನೆ ಸಿದ್ದರಾಮಯ್ಯನವರು ಮಾತನಾಡುವಾಗ ಹೇಳಿದಂತೆ ಕೆಟ್ಟ ಕಾಲ ದಾಟಿದ ಮೇಲೆ ಖಂಡಿತವಾಗಿ ಒಂದು ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ನಿರೀಕ್ಷೆ ಮಾಡಬಹುದಷ್ಟೇ.

ಲವ್‌ಮಾಕ್ಟೇಲ್ ಹಿಂದಿದೆ ಈ ಸೋಲಿನ ಕಥೆ

ನಿಮ್ಮ ಪ್ರಕಾರ ಲಾಕ್ಡೌನನ್ನು ಸಮರ್ಪಕವಾಗಿ ನಿಭಾಯಿಸಲು ಯಾವ ಕ್ರಮ ಕೈಗೊಳ್ಳಬಹುದು?
ಮೊದಲು ನಾನು ಸರ್ಕಾರಿ ಬಸ್ಸುಗಳನ್ನು ಆಹಾರ ಸರಬರಾಜಿಗೆ ಬಳಸುವ ಸಲಹೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದೆ. ಅದು ಆಲ್ರೆಡಿ ಕಾರ್ಯರೂಪದಲ್ಲಿದೆ ಎಂದು ಸ್ನೇಹಿತರು ಹೇಳಿದ್ದಾರೆ. ನನ್ನ ಪ್ರಕಾರ ಜನರನ್ನು ಮಾರ್ಕೆಟ್ ಗೆ ಕಳಿಸುವುದು ಎಂದರೆ ಗುಂಪು ಸೇರಿಸಿದ ಹಾಗೆಯೇ. ಅದನ್ನು ಅವಾಯ್ಡ್ ಮಾಡಬೇಕು ಎಂದರೆ ತಳ್ಳುಗಾಡಿಯಲ್ಲಿ ಮನೆಮನೆಗೂ ತರಕಾರಿ ಪದಾರ್ಥಗಳು ತಲುಪುವಂತಾಗಬೇಕು. ಹಿಂದೆ ಬೆಂಗಳೂರಿನ ಎಲ್ಲ ಕಡೆ ತಳ್ಳುಗಾಡಿಗಳೇ ಇದ್ದವು. ಈಗಲೂ ಅವುಗಳನ್ನೇ ಬೀದಿ ಬೀದಿಗೆ ಕಳುಹಿಸುವಂತಾದರೆ ಒಂದಷ್ಟು ಜನಕ್ಕೆ ಕೆಲಸವೂ ಸಿಕ್ಕಂತಾಗುತ್ತದೆ. ಎಲ್ಲರೂ ಮಾರ್ಕೆಟ್ ಗೆ ನುಗ್ಗಿ ತಕ್ಷಣ ಮನೆ ಸೇರಿ ಬಾಗಿಲು ಹಾಕಿಕೊಂಡರೆ ಸ್ಥಳೀಯ ಸಮಸ್ಯೆಗಳು ಕೂಡ ಅರಿವಾಗುವುದಿಲ್ಲ. ತರಕಾರಿ ಗಾಡಿಯ ಮೂಲಕವಾದರೂ ಸಣ್ಣಮಟ್ಟಿಗೆ ಚಟುವಟಿಕೆ ಇದ್ದರೆ ಆಯಾ ಪ್ರದೇಶದ ಮಂದಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿತುಕೊಂಡು ನೆರವಾಗಲು ಕೂಡ ಸಾಧ್ಯವಾಗಬಹುದು.

ಈ ಸಂದರ್ಭದಲ್ಲಿ ಸಂತ್ರಸ್ತರಿಗ ಸಹಾಯ ಮಾಡುವ ರೀತಿಯ ಬಗ್ಗೆ ನಿಮ್ಮ ಅನಿಸಿಕೆ ಏನು?
ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವವರು ಇದ್ದಾರೆ. ಸರ್ಕಾರದಲ್ಲಿ ಏನು ಫಂಡ್ ಇದೆ ಎನ್ನುವುದು ಇಂದು ಜನ ಸಾಮಾನ್ಯರಿಗೂ ತಿಳಿದಿದೆ. ಹಾಗಾಗಿ ಏನೇ ಸಹಾಯ ಮಾಡುವುದಿದ್ದರೂ ನಾವು ಆತ್ಮತೃಪ್ತಿ ಇರಿಸಿಕೊಂಡು ಮಾಡುವುದು ಮುಖ್ಯ. ಈ ಹಿಂದೆ ಕೊಡಗಿನಲ್ಲಿ ಕೆಲವೆಡೆ ನಡೆದಂತೆ, ಕೆಲವರು ಅಗತ್ಯ ಇರುವ, ಇಲ್ಲದ ವಸ್ತುಗಳನ್ನೆಲ್ಲ ಕೊಂಡೊಯ್ದು ಅಲ್ಲಿ ಬಿಸಾಕಿ ಬಂದಂತೆ ಆಗಬಾರದು. ಎಲ್ಲವನ್ನು ವ್ಯವಸ್ಥಿತವಾಗಿ ಮಾಡಬೇಕು. ಅದು ಸರ್ಕಾರದ ಕಡೆಯಿಂದಲೇ ಆದರೆ ಚೆನ್ನ. ಕೊಟ್ಟು ಫೇಸ್‌ಬುಕ್‌ನಲ್ಲಿ ಫೊಟೊ ಹಾಕುವುದು ಇನ್ನಷ್ಟು ಮಂದಿಗೆ ನೀಡಲು ಪ್ರೋತ್ಸಾಹವಾದೀತು, ಒಪ್ಪೋಣ. ಆದರೆ ಅದೇ ಸಂದರ್ಭದಲ್ಲಿ ಪಡೆಯುವವರ ಮನಸ್ಥಿತಿ ಹೇಗಿದೆ ಎನ್ನುವುದು ಮುಖ್ಯ. ನಾವು ಅವರಿಗೆ ಸಹಾಯ ಮಾಡುವುದೇ ಉದ್ದೇಶವಾಗಿದ್ದರೆ, ನಮ್ಮಿಂದ ಪಡೆದವರ ಕಷ್ಟವನ್ನು ತೋರಿಸುವ ಅಗತ್ಯ ಇರುವುದಿಲ್ಲ. ಕಲಾವಿದರ ವಿಚಾರಕ್ಕೆ ಬಂದರೆ ಅವರು ಖುದ್ದಾಗಿ ಮಾಡಬಹುದು, ಅಭಿಮಾನಿಗಳ ಮೂಲಕ ಮಾಡಬಹುದು. ಅಥವಾ ಅಭಿಮಾನಿಗಳೇ ಸ್ಟಾರ್ ಹೆಸರಲ್ಲಿ ಮಾಡಬಹುದು. ಇಲ್ಲಿ ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ ಸಹಾಯ ಯಾರನ್ನು ತಲುಪುತ್ತಿದೆ ಎನ್ನುವುದಷ್ಟೇ ಮುಖ್ಯ.

ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್ ಆಗಿರಿ

ನಿಮ್ಮ ನಿರೀಕ್ಷೆಯಲ್ಲಿ ಕೊರೋನ ಸಮಸ್ಯೆ ಯಾವ ರೀತಿಯಲ್ಲಿ ಅಂತ್ಯವಾದೀತು ?
ಮೊನ್ನೆ ಡಾ. ಸುಧಾಕರ್ ಅವರನ್ನು ಒಂದು ಪ್ರಶ್ನೆ ಕೇಳಿದೆ. ಇದು ಹೇಗೆ ಎಂಡ್ ಆಗಲಿದೆ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟವಾದ ಅರಿವು ಇಲ್ಲ. ಒಂದೋ ಇದಕ್ಕೆ ಔಷಧ ಕಂಡು ಹಿಡಿಯಬೇಕು. ಅಥವಾ ಸಂಪೂರ್ಣವಾಗಿ ರೋಗ ಮುಕ್ತ ಭಾರತ ಎಂದು ಘೋಷಿಸುವಂತಾಗಬೇಕು. ಇನ್ನು ಏನೂ ತೊಂದರೆ ಇಲ್ಲ ಎಂದು. ಅರ್ಧಂಬರ್ಧ ಇರುವಾಗಲೇ ಲಾಕ್‌ಡೌನ್ ಕೊನೆಗೊಳಿಸಿದರೆ ಮತ್ತೆ ಜನ ಓಡಾಟ ಶುರು ಮಾಡಲು, ಮಳಿಗೆಗಳು, ಚಿತ್ರಮಂದಿರ, ಹೋಟೆಲ್‌ಗಳಲ್ಲಿ ವ್ಯಾಪಾರ ಶುರುವಾಗಲು ಸಾಕಷ್ಟು ಸಮಯ ತೆಗದುಕೊಳ್ಳಬಹುದು. ಈಗಾಗಲೇ ಮನೆಯಲ್ಲಿ ಒಗ್ಗಿಕೊಂಡವರು, ರೋಗ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ ಎನ್ನುವ ಸಂದೇಹ ಇರುವ ಕಾರಣ ಸಾರ್ವಜನಿಕವಾಗಿ ಸುತ್ತಾಡಲು ಹಿಂಜರಿಯಬಹುದು ಎಂದು ನನ್ನ ಅನಿಸಿಕೆ. ಸರ್ಕಾರ ಹೇಳಿದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಬೀಳಬಹುದು. ಇದಕ್ಕೆಲ್ಲ ಸರ್ಕಾರವೇ ಒಂದು ಸ್ಟ್ರಟಜಿ ಮಾಡಬಹುದು ಅನ್ಸುತ್ತೆ. ಮಾಡ್ತೀವಿ ಅಂತ ನನ್ನಲ್ಲಿಯೂ ಹೇಳಿದ್ದಾರೆ. ಆದರೆ ಹೇಗೆ ಅಂತ ಗೊತ್ತಿಲ್ಲ. ನೋಡೋಣ.

ಇದೇ ವೇಳೆ ರೋಗ ಹರಡುವಿಕೆಯಲ್ಲಿ ಒಂದು ಧರ್ಮದ ಕೈವಾಡ ಇದೆಯೆಂದು ಆರೋಪಿಸಿರುವವರಿಗೆ ಏನು ಹೇಳುತ್ತೀರಿ?
ಈಗಾಗಲೇ ಅದು ತಪ್ಪು ಎನ್ನುವುದನ್ನು ನಮ್ಮ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೂ ದ್ವೇಷಿಸುವ ಸುದ್ದಿ ಹರಡಿರುವುದು ಖಂಡಿತವಾಗಿ ತಪ್ಪು. ಯಾಕೆಂದರೆ ಇಂಥ ಸಂದರ್ಭದಲ್ಲಿ ಜಾತಿ, ಧರ್ಮದ ವಿಚಾರಗಳನ್ನು ಅಲ್ಲಲ್ಲಿಗೆ ಬಿಟ್ಟು ಮುಂದೆ ಹೋಗಬೇಕು ನಾವು. ಆದರೆ ಮಾಧ್ಯಮಗಳನ್ನು ಆರೋಪಿಸಿಯೂ ಫಲವಿಲ್ಲ. ಯಾಕೆಂದರೆ ಅವರಿಗೆ ಸದ್ಯಕ್ಕೆ ಕೊರೋನ ಬಿಟ್ಟು ಬೇರೆ ಸುದ್ದಿ ಇಲ್ಲ! ಹಾಗಾಗಿ ಕೊರೋನದಲ್ಲೇ ಏನಾದರೊಂದು ಹೊಸತು ಸಿಕ್ಕಾಗ ಅದನ್ನು ದೊಡ್ಡದಾಗಿ ಹಬ್ಬಿಸುತ್ತಾರೆ. ಆದರೆ ಅವರು ತಮಗಿರುವಂಥ ಸಾಮಾಜಿಕ ಜವಾಬ್ದಾರಿಯನ್ನು ಕಾಪಾಡಿಕೊಂಡಿರಬೇಕು ಎನ್ನುವುದು ಮುಖ್ಯ. ಎಲ್ಲಕ್ಕಿಂತ ಇಂಥ ಸುದ್ದಿಗಳನ್ನು ನೋಡುವಾಗ ನಾವು ಅದನ್ನೇ ನಂಬಬೇಕೇ ಅಥವಾ ಬೇಡವೇ ಎನ್ನುವುದು ನಮಗೆ ಬಿಟ್ಟಿರುವಂಥದ್ದು. ಪ್ರತಿಯೊಬ್ಬರಿಗೂ ದೇವರು ತರ್ಕ ಬುದ್ಧಿ ಕೊಟ್ಟಿದ್ದಾನೆ. ನಮ್ಮ ಮನಸ್ಸಿಗೆ ತಪ್ಪು ಎಂದ ಕಂಡ ಮೇಲೆ ನಾವು ಅದನ್ನು ಬಿಟ್ಟು ಬಿಡಬೇಕು. ಈ ಸಮಯದಲ್ಲಿ ಎಲ್ಲವು ಎಲ್ಲರೂ ಪಾಸಿಟಿವ್ ಆಗಿ ಬದಲಾಗಬೇಕಿದೆ. ಒಂದು ವೇಳೆ ನಾವು ನೆಗೆಟಿವ್ ಕಡೆಗಷ್ಟೇ ಗಮನಿಸುತ್ತಾ ಹೋದರೆ ಪ್ರತಿಯೊಬ್ಬರೂ ಅದನ್ನು ಅದರ ದುಷ್ಪರಿಣಾಮಗಳನ್ನು ಅನುಭವಿಸುವ ದಿನಗಳು ದೂರವಿಲ್ಲ, ಅದು ಇನ್ನಷ್ಟು ವಿಪತ್ತಿಗೆ ದಾರಿಯಾದೀತು.

ಅಪ್ಪ-ಅಮ್ಮನ ಮಾತನ್ನು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ

ಒಂದು ವೇಳೆ ಈ ಬಿಡುವು ಬೇರೆ ಸಂದರ್ಭದಲ್ಲಿ ಸಿಕ್ಕಿದ್ದರೆ ಏನು ಮಾಡುತ್ತಿದ್ದಿರಿ?
ಇಲ್ಲ. ನಾನು ಹಾಗೆಲ್ಲ ಯೋಚಿಸುವುದಕ್ಕೇನೇ ಹೋಗುವುದಿಲ್ಲ. ಹಾಗೆ ಯೋಚಿಸುವುದೇ ಮನುಷ್ಯನ ಬಹುದೊಡ್ಡ ತಪ್ಪು. ಬ್ಯುಸಿಯಾಗಿದ್ದಾಗ ಫ್ರೀಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುವುದು. ಫ್ರೀಯಾಗಿದ್ದಾಗ ನಾನು ಬ್ಯುಸಿಯಾಗಿದ್ದಾಗ ಚೆನ್ನಾಗಿತ್ತು ಎಂದುಕೊಳ್ಳುವುದು.. ದಿಸ್ ಈಸ್ ದಿ ಬಿಗ್ಗೆಸ್ಟ್ ಪ್ರಾಬ್ಲಮ್! ಬ್ಯುಸಿಯಾಗಿದ್ದಾಗ ಬ್ಯುಸೀನೆಸ್ ಅನ್ನು ಎಂಜಾಯ್ ಮಾಡಿ. ಫ್ರೀಯಾಗಿದ್ದಾಗ ಫ್ರೀನೆಸ್ ಅನ್ನು ಎಂಜಾಯ್ ಮಾಡಿ. ಕಾನ್ಫ್ಲಿಕ್ಟ್ ಮಾಡುವ ಅಗತ್ಯವೇನಿದೆ? ನಾನು ಹೊಸ ಸ್ಕ್ರಿಪ್ಟ್ ರೆಡಿ ಮಾಡುವುದು, ತೋಟಗಾರಿಕೆ ಮಾಡುವುದು ಮೊದಲಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಅದು ಬಿಟ್ಟು ಕಣ್ಮುಂದೆ ಕೇಸರಿಬಾತ್ ಇಟ್ಟು ತಿನ್ನಲು ಹೇಳಿದಾಗ `ಅಯ್ಯಯ್ಯೋ ಒಬ್ಬಟ್ಟು ಇದ್ದಿದ್ರೆ  ಚೆನ್ನಾಗಿರುವುದು' ಎಂದುಕೊಳ್ಳಬಾರದು. ನಮ್ಮಲ್ಲಿ ಏನಿದೆಯೋ ಅದನ್ನು ಸರಿಯಾಗಿ ಆಸ್ವಾದಿಸಿಕೊಂಡು ತಿನ್ನುವುದನ್ನು ಕಲಿಯಬೇಕು. ನಡೆಯುವುದಿಲ್ಲ ಎಂದು ಗೊತ್ತಿದ್ದಾಗ ಅದನ್ನು ನೆನೆದು ಬೇಸರಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಅದು ನಮ್ಮನ್ನು ನಾವೇ ಟಾರ್ಚರ್ ಮಾಡಿಕೊಂಡ ಹಾಗೆ. ಮನುಷ್ಯರಷ್ಟು ತನ್ನನ್ನು ತಾನು ಟಾರ್ಚರ್ ಮಾಡಿಕೊಳ್ಳುವ ಮತ್ತೊಂದು ಜೀವಿಯೇ ಇಲ್ಲವಂತೆ!

"

 

Follow Us:
Download App:
  • android
  • ios