ಬೀಜಿಂಗ್(ಮೇ.27)‌: ವಿಶ್ವಾದ್ಯಂತ 54 ಲಕ್ಷ ಮಂದಿಗೆ ತಗುಲಿ, 3.45 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಎಂಬುದು ಸಣ್ಣ ತುಣುಕು ಮಾತ್ರ ಎಂದು ‘ಬಾವಲಿ ಮಹಿಳೆ’ ಎಂದೇ ಖ್ಯಾತರಾಗಿರುವ ಚೀನಾದ ಪ್ರಸಿದ್ಧ ವೈರಾಣು ತಜ್ಞೆ ಶಿ ಝೆಂಗ್ಲಿ ಅವರು ದಿಗಿಲು ಮೂಡಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.

ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ಪತ್ತೆ, ಕೋವಿಡ್‌ ಜತೆ ಹೋಲ್ತಿಲ್ವಂತೆ!

ವೈರಾಣುಗಳ ಬಗ್ಗೆ ಅಧ್ಯಯನವನ್ನು ನಾವು ಮಾಡದೇ ಹೋದರೆ ಮತ್ತೊಂದು ವ್ಯಾಧಿ ನಮ್ಮನ್ನು ಕಾಡಬಹುದು. ಮನುಕುಲವನ್ನು ಮುಂಬರುವ ಸಾಂಕ್ರಾಮಿಕ ರೋಗದಿಂದ ರಕ್ಷಿಸಬೇಕು ಎಂದಾದಲ್ಲಿ, ಕಾಡು ಪ್ರಾಣಿಗಳಲ್ಲಿರುವ ಅಪರಿಚಿತ ವೈರಸ್‌ಗಳ ಕುರಿತಂತೆ ಉನ್ನತ ಸಂಶೋಧನೆಗೆ ಮುಂದಾಗಬೇಕು. ಮೊದಲೇ ಎಚ್ಚರಿಕೆ ನೀಡಬೇಕು. ವಿಜ್ಞಾನಿಗಳು ಹಾಗೂ ಸರ್ಕಾರಗಳು ಪಾರದರ್ಶಕವಾಗಿರಬೇಕು. ಆದರೆ ವಿಜ್ಞಾನದಲ್ಲೂ ರಾಜಕೀಯ ಮಾಡಲಾಗುತ್ತಿದೆ. ಇದು ವಿಷಾದನೀಯ ಎಂದು ಚೀನಾದ ವುಹಾನ್‌ ವೈರಾಣು ಅಧ್ಯಯನ ಸಂಸ್ಥೆಯ ಉಪನಿರ್ದೇಶಕಿಯೂ ಆಗಿರುವ ಝೆಂಗ್ಲಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಹುಟ್ಟಿನ ತನಿಖೆ; ಚೀನಾ ಅಧ್ಯಕ್ಷರಿಗೆ ವಿಶೇಷ ಆಹ್ವಾನ ನೀಡಿದ WHO!

ಈಗ ಪತ್ತೆಯಾಗಿರುವ ಕೊರೋನಾ ವೈರಸ್‌ ಸಣ್ಣ ಪ್ರಮಾಣ ಮಾತ್ರ. ಇಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದ್ದಾರೆ. ಬಾವಲಿಗಳಲ್ಲಿನ ಕೊರೋನಾ ವೈರಸ್‌ ಕುರಿತು ಆಳವಾದ ಅಧ್ಯಯನ ಮಾಡುತ್ತಿರುವ ಕಾರಣ ಝೆಂಗ್ಲಿ ಅವರನ್ನು ‘ಬಾವಲಿ ಮಹಿಳೆ’ ಎಂದು ಕರೆಯಲಾಗುತ್ತದೆ.