ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಶೋ ರೂಂ ಆರಂಭಿಸುತ್ತಿದೆ. ಮುಂಬೈನಲ್ಲಿ ಇಂದು ಶೋ ರೂಂ ಉದ್ಘಾಟನೆಗೊಳ್ಳುತ್ತಿದೆ. ಉದ್ಘಾಟನೆ ಕಾರಣದಿಂದ ಇದೀಗ ಟೆಸ್ಲಾ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. 

ಮುಂಬೈ (ಜು.15) ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಟಾಟಾ ಮೋಟಾರ್ಸ್, ಮಹೀಂದ್ರ, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಇದೀಗ ಈ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡಲು ವಿಶ್ವದ ಅತೀ ದೊಡ್ಡ ಹಾಗೂ ವಿಶ್ವಾಸಾರ್ಹತೆಯ ಎಲೆಕ್ಟ್ರಿಕ್ ಕಾರು ಟೆಸ್ಲಾ ಭಾರತಕ್ಕೆ ಎಂಟ್ರಿಕೊಡುತ್ತಿದೆ. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಶೋ ರೂಂ ಆರಂಂಭಿಸುತ್ತಿದೆ. ಮುಂಬೈನ ಬ್ಯಾಂಡ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ ಭಾರತದ ಮೊದಲ ಟೆಸ್ಲಾ ಶೋ ರೂಂ ಉದ್ಘಾಟನೆಗೊಳ್ಳುತ್ತಿದೆ. ಇಂದು (ಜುಲೈ 15 ) ಈ ಶೋ ರೂಂ ಉದ್ಘಾಟನೆಗೊಳ್ಳಲಿದೆ. ವಿಶೇಷ ಅಂದರೆ ಈ ಸಂಭ್ರಮದ ದಿನ ಟೆಸ್ಲಾ ತನ್ನ ಕಾರುಗಳಿಗೆ ಭರ್ಜರಿ ಆಫರ್ ಘೋಷಿಸಿದೆ.

ಟೆಸ್ಲಾ ಕಾರಿಗೆ ಉದ್ಘಾಟನಾ ಆಫರ್

ಟೆಸ್ಲಾ ಶೋ ರೂಂ ಮುಂಬೈನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಸದ್ಯ ಟೆಸ್ಲಾದ ವೈ ಮಾಡೆಲ್ ಕಾರುಗಳ ಮೂಲಕ ಭಾರತದಲ್ಲಿ ಮಾರಾಟ ಆರಂಭಿಸುತ್ತಿದೆ. ಭಾರತದಲ್ಲಿ ಟೆಸ್ಲಾ ವೈ ಮಾಡೆಲ್ ಕಾರಿನ ಬೆಲೆ 61 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಉದ್ಘಾಟನಾ ಆಫರ್ ಈ ಮೂಲಕ ಈ ರೇರ್ ವೀಲ್ ಡ್ರೈವ್ ಕಾರು ಖರೀದಿಸಿದರೆ ಈ ಕಾರು 59.89 ಲಕ್ಷ ರೂಪಾಯಿಗೆ ಲಭ್ಯವಿದೆ. ಈ ಮೂಲಕ ಆರಂಭಿಕ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಸ್ವಾಗತ ಕೋರಿದ ಸಿಎಂ ದೇವೇಂದ್ರ ಫಡ್ನವಿಸ್

ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ಟೆಸ್ಲಾ ಎಲೆಕ್ಟ್ರಿಕ್ ಕಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ವಾಗತ ಕೋರಿದ್ದಾರೆ. ಟೆಸ್ಲಾ ಸರಿಯಾದ ನಗರ, ಸರಿಯಾದ ರಾಜ್ಯಕ್ಕೆ ಆಗಮಿಸಿದೆ. ಟೆಸ್ಲಾ ಕೇವಲ ಎಲೆಕ್ಟ್ರಿಕ್ ಕಾರು ಮಾತ್ರವಲ್ಲ, ಇದು ಆವಿಷ್ಕಾರ ಹಾಗೂ ತಂತ್ರಜ್ಞಾನದ ಕಾರು. ಭಾರತದಲ್ಲೂ ಟೆಸ್ಲಾ ಬಯಸುತ್ತಿರುವ ಜನರಿದ್ದಾರೆ. ಇದೀಗ ಸೂಕ್ತ ಸಮಯ ಎಂದು ಫಡ್ನವಿಸ್ ಹೇಳಿದ್ದಾರೆ.

ಭಾರತದಲ್ಲಿ ಉತ್ಪಾದನೆ ಇಲ್ಲ, ಹೆಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ

ಭಾರತದಲ್ಲಿ ಟೆಸ್ಲಾ ಉತ್ಪಾದನೆ ಕುರಿತು ಹಲವು ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಕಳೆದ ವಾರ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಟೆಸ್ಲಾ ಭಾರತದಲ್ಲಿ ಕಾರು ಉತ್ಪಾದನೆ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಟೆಸ್ಲಾ ಸದ್ಯ ಭಾರತದಲ್ಲಿ ಕಾರು ಮಾರಾಟ ಮಾಡಲು ಬಯಸುತ್ತಿದೆ. ಆದರೆ ಉತ್ಪಾದನೆ ಇಲ್ಲ ಎಂದಿದ್ದಾರೆ.

ಟೆಸ್ಲಾ ಅಮರಿಕ, ಚೀನಾ ಘಟಕಗಳಿಂದ ಕಾರು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದೆ. ಇದೇ ಕಾರಣದಿಂದ ಟೆಸ್ಲಾ ವೈ ಮಾಡೆಲ್ ಕಾರು 60 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ದುಬಾರಿ ಆಮದು ಸುಂಕ ಪಾವತಿ ಮಾಡಬೇಕಿದೆ. ಸದ್ಯ ಟೆಸ್ಲಾ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುವ ಪದ್ಧತಿಯಲ್ಲಿ ಮುಂದುುವರಿಯಲಿದೆ.

ಎಲಾನ್ ಮಸ್ಕ್ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ

ಕಳೆದ ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಎಲಾನ್ ಮಸ್ಕ್ ಜೊತೆ ಮಾತುಕತೆ ನಡೆಸಿದ್ದರು. ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರದಲ್ಲಿ ಟೆಸ್ಲಾ ಹಾಗೂ ಭಾರತ ಜಂಟಿಯಾಗಿ ಹೆಜ್ಜೆ ಹಾಕುವ ಕುರಿತು ಮೋದಿ ಮಾತುಕತೆ ನಡೆಸಿದ್ದರು. ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಎಲಾನ್ ಮಸ್ಕ್ ಭೇಟಿಯಾಗಿದ್ದರು.