ಹೈದರಾಬಾದ್‌[ಆ.13]: ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ತೆಲಂಗಾಣದ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಪ್ರಮುಖ ಘಟ್ಟಗಳ ಪೈಕಿ ಒಂದಾದ, ಎಂಜಿನಿಯರಿಂಗ್‌ ಅದ್ಭುತ ಎಂದೇ ಬಣ್ಣಿತ ಲಕ್ಷ್ಮೇಪುರಂ ಭೂಗತ (ಭೂಮಿಯ 470 ಅಡಿ ಆಳ) ಪಂಪ್‌ಹೌಸ್‌ನ ಪ್ರಾಯೋಗಿಕ ಕಾರ್ಯಾಚರಣೆ ಭಾನುವಾರ ಯಶಸ್ವಿಯಾಗಿ ನಡೆದಿದೆ.

ಗೋದಾವರಿ ನದಿಯ ಪ್ರವಾಹದ ನೀರನ್ನು ಭೂಮಿಯಾಳದಲ್ಲಿನ ಸಂಗ್ರಹಾರಗಳಲ್ಲಿ ಹಿಡಿದಿಟ್ಟು ಬಳಿಕ ಅದನ್ನು ಭಾರೀ ಪಂಪ್‌ಗಳ ಮೂಲಕ ಮೇಲಕ್ಕೆತ್ತಿ, 1832 ಕಿ.ಮೀ ಉದ್ದದ ಕಾಲುವೆಗಳ ಮೂಲಕ ಇಡೀ ರಾಜ್ಯದ ಕೃಷಿ ಚಟುವಟಿಕೆಗೆ ನೀರುಣಿಸುವ ಮತ್ತು ಹಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಗೆ ಅಂದಾಜು 80000 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಪ್ರಾಕೃತಿಕ ನಿಯಮಗಳ ಪ್ರಕಾರ ನದಿಯ ನೀರು ಗುರುತ್ವಾಕರ್ಷಣೆ ಮೂಲಕ ಕೆಳ ಪ್ರದೇಶಕ್ಕೆ ಹರಿದು ಹೋಗುವುದು ಸಹಜ, ಆದರೆ ಕಾಳೇಶ್ವರಂ ಯೋಜನೆಯಡಿ ನದಿ ನೀರನ್ನು ಭೂಮಿಯ ಆಳದಲ್ಲಿ ಸಂಗ್ರಹಿಸಿ ಎತ್ತರ ಪ್ರದೇಶಕ್ಕೆ ಹರಿಸುವ ಮೂಲಕ ಕೃಷಿ ಮತ್ತು ಕುಡಿಯಲು ಬಳಕೆ ಮಾಡಲು ಉದ್ದೇಶಿಸಲಾಗಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಪಂಪ್‌ ಹೌಸ್‌ಗೆ ಅಳವಡಿಸಲಾದ ಅತ್ಯಾಧುನಿಕ ಮೋಟರ್‌ಗಳು ದೇಶೀಯ ತಂತ್ರಜ್ಞಾನದಡಿ ನಿರ್ಮಿತವಾಗಿದ್ದು, ಪ್ರತಿನಿತ್ಯ 2 ಟಿಎಂಸಿ ನೀರನ್ನು ಮೇಲೆ ಎತ್ತಿ, ಕಾಲುವೆಗಳ ಮೂಲಕ ಇತರೆ ಭೂಗತ ಜಲ ಸಂಗ್ರಹಾಗಾರಗಳಿಗೆ ಪೂರೈಕೆ ಮಾಡಲಿವೆ ಎಂದು ಯೋಜನೆ ಹೊಣೆ ಹೊತ್ತಿರುವ ಎಂಇಐಎಲ್‌ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಹೇಳಿದ್ದಾರೆ.

ಭೂ ಅಂತರಾಳದಲ್ಲೇ ಜಲಾಶಯ!:

ಈ ಏತ ನೀರಾವರಿ ಯೋಜನೆಗಾಗಿ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭೂಮಿಯ ಗರ್ಭದಲ್ಲೇ 145 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ 20 ಜಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ. ಭೂಮಿಯ ಅಂತರಾಳದಲ್ಲಿ ಒಂದಕ್ಕೊಂದು 330 ಕಿ.ಮೀ ದೂರವಿದ್ದು, ಅವುಗಳಲ್ಲವೂ ಸುರಂಗ ಮಾರ್ಗದ ಸಂಪರ್ಕ ಹೊಂದಿರಲಿವೆ. ಮೇಡಾರಂ ಜಲಾಶಯ ಹಾಗೂ ಯೆಲ್ಲಂಪಲ್ಲಿಯಲ್ಲಿರುವ ಜಲಾಶಯದ ನಡುವೆ 21 ಕಿ.ಮೀ ದೂರವಿದ್ದು, ಇದು ಅತೀ ಉದ್ದದ ಸುರಂಗ ಸಂಪರ್ಕವಾಗಿದೆ. ಆ ನಂತರ ಈ ನೀರನ್ನು ರೈತರ ಜಮೀನು, ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ಪೈಪ್‌ಲೈನ್‌ ಹಾಗೂ ಕ್ಯಾನೆಲ್‌ಗಳ ಮೂಲಕ ಹರಿಸಲಾಗುತ್ತದೆ.