Union Budget 2024: ಆಸ್ತಿ ಮಾರಾಟ ಮಾಡಿದರೆ ಇನ್ನು ಹೆಚ್ಚು ಕ್ಯಾಪಿಟಲ್ ಗೇನ್ ಟ್ಯಾಕ್ಸ್
ಬಜೆಟ್‌ನಲ್ಲಿ ನಿರ್ಮಲಾ ಅವರು ಎಲ್ಲ ಹಣಕಾಸು ಹಾಗೂ ಹಣಕಾಸೇತರ ಸ್ವತ್ತುಗಳ ದೀರ್ಘಾವಧಿ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದ್ದಾರೆ.
ಆಸ್ತಿ ಮಾರಾಟದಿಂದ ಬಂದ ಲಾಭವನ್ನು ಹಣದುಬ್ಬರ ಜತೆ ಹೊಂದಾಣಿಕೆ ಮಾಡಲು ಈವರೆಗೂ ನೀಡಲಾಗುತ್ತಿದ್ದ ‘ಇಂಡೆಕ್ಷೇಷನ್ ಬೆನಿಫಿಟ್’ ಅನ್ನು ಬಜೆಟ್‌ನಲ್ಲಿ ಹಿಂಪಡೆಯಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಹೆಚ್ಚು ತೆರಿಗೆ ಬಿದ್ದಂತಾಗಿದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ನಿರ್ಮಲಾ ಅವರು ಎಲ್ಲ ಹಣಕಾಸು ಹಾಗೂ ಹಣಕಾಸೇತರ ಸ್ವತ್ತುಗಳ ದೀರ್ಘಾವಧಿ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದ್ದಾರೆ. ಇದೇ ವೇಳೆ, ಆಸ್ತಿ ಮಾರಾಟ ವೇಳೆ ದೊರೆಯುತ್ತಿದ್ದ ಇಂಡೆಕ್ಷೇಷನ್ ಬೆನಿಫಿಟ್ ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಆಸ್ತಿ ಮಾರಿದವರ ಕ್ಯಾಪಿಟಲ್ ಗೇನ್ ಹೆಚ್ಚಾಗಲಿದ್ದು, ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ರಿಯಲ್ ಎಸ್ಟೇಟ್ ಉದ್ಯಮ ವಲಯ ಹೇಳುತ್ತಿದೆ.
ತೆರಿಗೆ ಹೇಗೆ ಹೆಚ್ಚಳ?: ಉದಾಹರಣೆಗೆ, 2020-21ನೇ ಸಾಲಿನಲ್ಲಿ 1 ಲಕ್ಷ ರು.ಗೆ ಆಸ್ತಿ ಖರೀದಿಸಿ, ಅದನ್ನು 2024-25ನೇ ಸಾಲಿನಲ್ಲಿ 5 ಲಕ್ಷ ರು.ಗೆ ಮಾರಾಟ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಆಸ್ತಿ ಖರೀದಿ ದರ 1 ಲಕ್ಷ ರು. ಆಗಿದ್ದರೂ, ಹಣದುಬ್ಬರಕ್ಕೆ ಹೊಂದಾಯಿಸಲ್ಪಟ್ಟ ಇಂಡೆಕ್ಷೇಷನ್ ಬೆನಿಫಿಟ್‌ನಿಂದಾಗಿ ಖರೀದಿ ವೆಚ್ಚವನ್ನು 1.2 ಲಕ್ಷ ರು. ಎಂದು ತೋರಿಸಬಹುದಾಗಿತ್ತು. ತನ್ಮೂಲಕ 3.8 ಲಕ್ಷ ರು. ಲಾಭ ಬಂದಿದೆ ಎಂದು ಆ ಮೊತ್ತಕ್ಕೆ ತೆರಿಗೆ ಕಟ್ಟಿದರೆ ಸಾಕಾಗಿತ್ತು. ಆದರೆ ಇದೀಗ ಇಂಡೆಕ್ಷೇಷನ್ ಬೆನಿಫಿಟ್ ತೆಗೆದು ಹಾಕಿರುವುದರಿಂದ ಆಸ್ತಿ ಖರೀದಿ ದರ 1 ಲಕ್ಷ ರು. ಇರುತ್ತದೆ. ಆಸ್ತಿ ಮಾರಾಟದಿಂದ ಬಂದ ಲಾಭ 4 ಲಕ್ಷ ರು.ಗೆ ಏರಿಕೆಯಾಗುತ್ತದೆ. ಅದಕ್ಕೆ ತಕ್ಕಂತೆ ಕ್ಯಾಪಿಟಲ್ ಗೇನ್ ತೆರಿಗೆಯೂ ಹೆಚ್ಚಾಗುತ್ತದೆ.
ವಿತ್ತೀಯ ಕೊರತೆ ಶೇ.4.9: 2024-25ರ ವಿತ್ತೀಯ ಕೊರತೆಯು ಜಿಡಿಪಿಯ ಶೇ.4.9ರಷ್ಟಿರಬಹದು ಎಂದು ಅಂದಾಜಿಸಲಾಗಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಅಲ್ಲದೆ, 2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇ 4.5 ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ, 2023-24 ರಲ್ಲಿ, ಸರ್ಕಾರವು ಆರಂಭದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಜಿಡಿಪಿಯ ಶೇ.5.9 ಕ್ಕೆ ನಿಗದಿಪಡಿಸಿತ್ತು, ನಂತರ ಅದನ್ನು ಶೇ.5.8 ಕ್ಕೆ ಪರಿಷ್ಕರಿಸಲಾಯಿತು. ಹೆಚ್ಚುವರಿಯಾಗಿ, 2025-26 ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ 4.5 ಪ್ರತಿಶತಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಹಣಕಾಸಿನ ಕೊರತೆಯು ಸರ್ಕಾರದ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ನಡುವಿನ ಅಂತರವನ್ನು ಪ್ರತಿನಿಧಿಸುತ್ತದೆ, ಈ ಅಂತರವನ್ನು ಕಡಿಮೆ ಮಾಡಲು ಅಗತ್ಯವಿರುವ ಸಾಲದ ಮೊತ್ತವನ್ನು ಸೂಚಿಸುತ್ತದೆ.
ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!
ಇ- ಕೋರ್ಟ್ ಯೋಜನೆಗೆ 1500 ಕೋಟಿ ಅನುದಾನ: ನ್ಯಾಯಾಲಯಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸುವ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 1500 ಕೋಟಿ ರು. ಅನುದಾನ ನೀಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಕೆಳ ಹಂತದ ನ್ಯಾಯಾಲಯಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಹೆಚ್ಚಳದ ಮೂರನೇ ಹಂತದ ಯೋಜನೆಯನ್ನು ಒಟ್ಟಾರೆ 4 ವರ್ಷಗಳ ಅವಧಿಯಲ್ಲಿ 7210 ಕೋಟಿ ರು. ವೆಚ್ಚದಲ್ಲಿ ಜಾರಿಗೆ ತರುವ ಘೋಷಣೆ ಮಾಡಿತ್ತು. ಆ ಯೋಜನೆಗೆ ಇದೀಗ ಮಂಡಿಸಲಾದ ಬಜೆಟ್‌ನಲ್ಲಿ 1500 ಕೋಟಿ ರು. ಅನುದಾನ ಒದಗಿಸಲಾಗಿದೆ. ಮೂರನೇ ಹಂತದ ಇ- ಕೋರ್ಟ್ ಯೋಜನೆಯಡಿ ಕೋರ್ಟ್‌ನ ಎಲ್ಲಾ ಹಾಲಿ ಮತ್ತು ಹಿಂದಿನ 3108 ಕೋಟಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಜೊತೆಗೆ ಈ ಹಂತದಲ್ಲಿ ಕೋರ್ಟ್‌ನ ಎಲ್ಲಾ ವ್ಯವಸ್ಥೆಗಳು ಕ್ಲೌಡ್ ವ್ಯವಸ್ಥೆಗೆ ವರ್ಗಾವಣೆಗೊಳ್ಳಲಿದೆ.