Asianet Suvarna News Asianet Suvarna News

ವೃದ್ಧಾಪ್ಯದಲ್ಲಿ ಆರ್ಥಿಕ ನೆರವು ನೀಡುತ್ತವೆ ಕೇಂದ್ರದ ಈ 6 ವಿಶೇಷ ಪಿಂಚಣಿ ಯೋಜನೆಗಳು; ಫಲಾನುಭವಿಯಾಗೋದು ಹೇಗೆ?

ಹಿರಿಯ ನಾಗರಿಕರಿಗೆ ಪಿಂಚಣಿ ಒದಗಿಸಲು ಕೇಂದ್ರ ಸರ್ಕಾರ  6 ವಿಶೇಷ ಪಿಂಚಣಿ ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳ ಪ್ರಯೋಜನ ಪಡೆಯೋದು ಹೇಗೆ? ಎಷ್ಟು ಪಿಂಚಣಿ ಸಿಗುತ್ತದೆ? ಇಲ್ಲಿದೆ ಮಾಹಿತಿ. 
 

Six special pension schemes for senior citizens Details here anu
Author
First Published Aug 24, 2023, 4:40 PM IST

Business Desk:ನಿವೃತ್ತಿ ನಂತರದ ಬದುಕನ್ನು ನೆಮ್ಮದಿಯಿಂದ ಸಾಗಿಸಲು ಪಿಂಚಣಿ ಅಗತ್ಯ. ಉದ್ಯೋಗ ಸಿಕ್ಕ ತಕ್ಷಣವೇ ಕೆಲವರು ನಿವೃತ್ತಿಯ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿ ಒಂದಿಷ್ಟು ಹಣವನ್ನು ಹೂಡಿಕೆ ಅಥವಾ ಉಳಿತಾಯ ಮಾಡುತ್ತಾರೆ ಕೂಡ. ಹೀಗೆ ನಿವೃತ್ತಿ ನಂತರದ ಬದುಕಿಗೆ ಉಳಿತಾಯ ಮಾಡೋರು ಪಿಂಚಣಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಮಾಹಿತಿಯನ್ನು ಹೊಂದಿರೋದು ಅಗತ್ಯ.  ಹಿರಿಯ ನಾಗರಿಕರಿಗೆ ಅನೇಕ ವಿಶೇಷ ಪಿಂಚಣಿ ಯೋಜನೆಗಳನ್ನು ಭಾರತ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಗಳು ನಿವೃತ್ತಿ ಬಳಿಕ ಅವರಿಗೆ ಆರ್ಥಿಕ ಸದೃಢತೆ ಹಾಗೂ ಭದ್ರತೆಯನ್ನು ಒದಗಿಸಲಿವೆ. ಈ ಯೋಜನೆಗಳನ್ನು ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ರೀತಿಯಲ್ಲೇ ರೂಪಿಸಲಾಗಿದೆ. ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಆರು ವಿಶೇಷ ಪಿಂಚಣಿ ಯೋಜನೆಗಳನ್ನು ರೂಪಿಸಿದೆ. ಹಾಗಾದ್ರೆ ಈ ಆರು ವಿಶೇಷ ಪಿಂಚಣಿ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.

1.ಅಟಲ್ ಪಿಂಚಣಿ ಯೋಜನೆ (ಎಪಿವೈ): ಎಪಿವೈ ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು, ಎಲ್ಲ ಭಾರತೀಯರಿಗೂ ಸಾಮಾಜಿಕ ಭದ್ರತೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು. ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಣೆ ಮಾಡುತ್ತಿದೆ. ಈ ಯೋಜನೆಯಡಿ ಐದು ಪಿಂಚಣಿ ಯೋಜನೆ ಸ್ಲ್ಯಾಬ್ ಗಳು ಲಭ್ಯವಿವೆ. ಈ ಯೋಜನೆಯಡಿ 60ನೇ ವಯಸ್ಸಿನಲ್ಲಿ ಚಂದಾದಾರರಿಗೆ ಭಾರತ ಸರ್ಕಾರ 1000ರೂ., 2,000ರೂ., 3,000ರೂ., 4,000ರೂ. ಹಾಗೂ 5,000ರೂ. ನೀಡುತ್ತದೆ. 

ಅಟಲ್ ಪಿಂಚಣಿ ಯೋಜನೆ ನೋಂದಣಿಯಲ್ಲಿ ಶೇ.20ರಷ್ಟು ಏರಿಕೆ; 5.2 ಕೋಟಿಗಿಂತಲೂ ಅಧಿಕ ಜನರು ಸೇರ್ಪಡೆ

2.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್): ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಎಲ್ಲ ಪಿಂಚಣಿ ಯೋಜನೆಗಳಲ್ಲಿ ಎನ್ ಪಿಎಸ್ ಅತ್ಯಂತ ಜನಪ್ರಿಯತೆ ಗಳಿಸಿದೆ. ಇದು ಚಂದಾದಾರರಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಎನ್ ಪಿಎಸ್ ಅನ್ನು ಪಿಎಫ್ ಆರ್ ಡಿ ನಿರ್ವಹಿಸುತ್ತದೆ. ಇನ್ನು ಇದನ್ನು ನಿವೃತ್ತಿಯ ಬಳಿಕ ಹಿರಿಯ ನಾಗರಿಕರಿಗೆ ಹಣಕಾಸಿನ ಭದ್ರತೆ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. 

3.ಎಲ್ ಐಸಿ ಪ್ರಧಾನ ಮಂತ್ರಿ ವಯಾ ವಂದನ ಯೋಜನೆ: ಎಲ್ ಐಸಿ ಪ್ರಧಾನ ಮಂತ್ರಿ ವಯಾ ವಂದನ ಯೋಜನೆಯನ್ನು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿದೆ. ಈ ಯೋಜನೆ 10 ವರ್ಷಗಳ ತನಕ ಭರವಸೆ ನೀಡಿರುವ ಪಿಂಚಣಿಯನ್ನು ಒದಗಿಸುತ್ತದೆ. ಹೀಗಾಗಿ ಕನಿಷ್ಠ 60 ವರ್ಷ ವಯಸ್ಸಿನ ವ್ಯಕ್ತಿ ಈ ಪಾಲಿಸಿ ಖರೀದಿಸಬಹುದು. ಈ ಪಾಲಿಸಿ ಅವಧಿ 10 ವರ್ಷಗಳು. ಇನ್ನು ಈ ಪಾಲಿಸಿ ಅಡಿಯಲ್ಲಿ ತಿಂಗಳಿಗೆ ಕನಿಷ್ಠ ಪಿಂಚಣಿ 1,000ರೂ. ಹಾಗೆಯೇ ತ್ರೈಮಾಸಿಕಕ್ಕೆ 3,000ರೂ., ಅರ್ಧವರ್ಷಕ್ಕೆ 6,000ರೂ. ಹಾಗೂ ವಾರ್ಷಿಕವಾಗಿ 12,000ರೂ. 

4.ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್ ಎಸ್ ಎಪಿ): ಈ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಕ್ಕೆ ಸೇರಿದ ಹಿರಿಯ ನಾಗರಿಕರು, ವಿಧವೆ ಹಾಗೂ ವಿಕಲಾಂಗ ವ್ಯಕ್ತಿಗಳಿಗೆ ತಿಂಗಳಿಗೆ 200ರೂ.ನಿಂದ 500ರೂ. ತನಕ ಆರ್ಥಿಕ ನೆರವು ನೀಡಲಾಗುತ್ತದೆ. ಇನ್ನು ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ 20 ಸಾವಿರ ರೂ. ನೆರವನ್ನು ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ.

NPS ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಚಿಂತನೆ; ವಿತ್ ಡ್ರಾ ನಿಯಮದಲ್ಲಿ ಶೀಘ್ರ ಬದಲಾವಣೆ ಸಾಧ್ಯತೆ

5. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS):ಈ ಯೋಜನೆಯಡಿಯಲ್ಲಿ ಬಿಪಿಎಲ್ ವರ್ಗಕ್ಕೆ ಸೇರಿದ 60-79 ವಯಸ್ಸಿನ ಹಿರಿಯರಿಗೆ ತಿಂಗಳಿಗೆ 200ರೂ. ಪಿಂಚಣಿ ನೀಡಲಾಗುತ್ತದೆ. ಇನ್ನು 80 ವರ್ಷ ವಯಸ್ಸನ್ನು ತಲುಪಿದ ತಕ್ಷಣ ಈ ಪಿಂಚಣಿ ಮೊತ್ತವನ್ನು ತಿಂಗಳಿಗೆ 500ರೂ.ಗೆ ಏರಿಕೆ ಮಾಡಲಾಗುತ್ತದೆ.

6.ವರಿಷ್ಠ ಪಿಂಚಣಿ ಬಿಮಾ ಯೋಜನೆ (VPBY): ಭಾರತೀಯ ವಿಮಾ ನಿಗಮ (ಎಲ್ ಐಸಿ) ಭಾರತದ ಹಿರಿಯ ನಾಗರಿಕರಿಗೆ ವರಿಷ್ಠ ಪಿಂಚಣಿ ಬಿಮಾ ಯೋಜನೆಯನ್ನು ರೂಪಿಸಿದೆ. ಈ ದೊಡ್ಡ ಮೊತ್ತದ ಠೇವಣಿ ಮೇಲೆ ವಾರ್ಷಿಕ ಶೇ.9 ಬಡ್ಡಿದರವನ್ನು ನೀಡಲಾಗುತ್ತಿದೆ.

Follow Us:
Download App:
  • android
  • ios