ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ: ಅಬಕಾರಿ ಸುಂಕ ಇಳಿಕೆಗೆ ಕೇಂದ್ರದ ಮೇಲೆ ಒತ್ತಡ!
ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ| ದೇಶದ ಎಲ್ಲಾ ಮಹಾನಗರಗಳಲ್ಲೂ ಪೆಟ್ರೋಲ್, ಡೀಸೆಲ್ ತುಟ್ಟಿ| ಅಬಕಾರಿ ಸುಂಕ ಇಳಿಕೆಗೆ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ
ನವದೆಹಲಿ(ಜ.24): ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀ.ಗೆ 25 ಪೈಸೆಯಷ್ಟುಏರಿಕೆ ಮಾಡಿವೆ. ಇದರೊಂದಿಗೆ ಪೆಟ್ರೋಲ್ ಬೆಲೆ ಮುಂಬೈನಲ್ಲಿ 92.28 ರು., ಬೆಂಗಳೂರಿನಲ್ಲಿ 88.59 ರು., ಚೆನ್ನೈ 88.29 ರು., ಕೋಲ್ಕತಾ 87.11, ದೆಹಲಿಯಲ್ಲಿ 85.70 ರು. ಗೆ ತಲುಪಿದೆ. ಇನ್ನು ಡೀಸೆಲ್ ದರ ಮುಂಬೈನಲ್ಲಿ 82.66 ರು., ಚೆನ್ನೈನಲ್ಲಿ 81.14 ರು., ಬೆಂಗಳೂರಿನಲ್ಲಿ 80,47 ರು., ದೆಹಲಿಯಲ್ಲಿ 75.88 ರು., ಕೋಲ್ಕತಾ 79.48 ರು.,ಗೆ ತಲುಪಿದೆ. ಇದರೊಂದಿಗೆ ದೇಶದ ಎಲ್ಲಾ ಮಹಾನಗರಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿದಂತೆ ಆಗಿದೆ. ಇದರೊಂದಿಗೆ ಈ ವಾರ ಎರಡೂ ತೈಲ ಬೆಲೆಗಳ ದರ ತಲಾ 1 ರು.ನಷ್ಟುಏರಿಕೆಯಾದಂತೆ ಆಗಿದೆ.
"
ಕಾರಣ ಏನು?:
ವಿಶ್ವದ ಅತಿದೊಡ್ಡ ಕಚ್ಚಾತೈಲ ಉತ್ಪಾದನಾ ದೇಶಗಳ ಪೈಕಿ ಒಂದಾದ ಸೌದಿ ಅರೇಬಿಯಾದಲ್ಲಿ ತೈಲ ಉತ್ಪಾದನೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಪರಿಣಾಮ ದೇಶೀ ಮಾರುಕಟ್ಟೆಯಲ್ಲೂ ಅದು ಪ್ರತಿಧ್ವನಿಸಿದೆ ಎಂಬುದು ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ವಾದ.
ಸುಂಕ ಇಳಿಕೆ ಮಾತಿಲ್ಲ:
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲೆ ಇಳಿದಾಗ ಕೇಂದ್ರ ಸರ್ಕಾರ, ಭಾರೀ ಪ್ರಮಾಣದಲ್ಲಿ ಅಬಕಾರಿ ಸುಂಕ ಏರಿಸುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಅಬಕಾರಿ ಸುಂಕ ಇಳಿಸುವ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಅಬಕಾರಿ ಸುಂಕ ಇಳಿಸಬೇಕು ಎಂದು ವಿಪಕ್ಷಗಳು ಮತ್ತು ಜನಸಾಮಾನ್ಯರು ಆಗ್ರಹ ಮಾಡುತ್ತಿದ್ದಾರೆ. ಈ ಹಿಂದೆ 2018ರ ಅ.4ರಂದು ತೈಲ ದರ ಸಾರ್ವಕಾಲಿಕ ಗರಿಷ್ಠ ತಲುಪಿದಾಗ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 1.50 ರು. ಇಳಿಸಿ ಜನರಿಗೆ ನೆರವಾಗಿತ್ತು.
ಭಾರೀ ಸುಂಕ:
ಕಳೆದ ವರ್ಷ ಅಂತಾರಾಷ್ಟ್ರೀಯ ಕಚ್ಚಾತೈಲದ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಬೆಲೆ ಇಳಿಕೆಯ ಲಾಭ ಪಡೆಯಲು ಎರಡು ಬಾರಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್‌ನ ಪ್ರತಿ ಲೀಟರ್‌ಗೆ ಒಟ್ಟು 13 ರು. ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ ಒಟ್ಟು 16 ರು. ಏರಿಕೆ ಮಾಡಿತ್ತು. ಹೀಗಾಗಿ ಪೆಟ್ರೋಲ್ ಮೇಲೆ ಸದ್ಯ ಪ್ರತಿ ಲೀಟರ್‌ಗೆ 32.98 ರು. ಹಾಗೂ ಡೀಸೆಲ್‌ನ ಪ್ರತಿ ಲೀಟರ್ ಮೇಲೆ 31.83 ರು. ಅಬಕಾರಿ ಸುಂಕ ವಿಧಿಸಲಾಗುತ್ತಿದೆ. 2014ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪೆಟ್ರೋಲ್‌ನ ಪ್ರತಿ ಲೀಟರ್‌ಗೆ ಅಬಕಾರಿ ಸುಂಕ 9.48 ರು. ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ 3.56 ರು. ಇತ್ತು.
ಭರ್ಜರಿ ಆದಾಯ:
ಅಬಕಾರಿ ಸುಂಕ ಹೆಚ್ಚಳದಿಂದಾಗಿ ಕಳೆದ ಏಪ್ರಿಲ್ ಬಳಿಕ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 64 ಕೋಟಿ ರು. ಆದಾಯ ಹರಿದುಬಂದಿದೆ.