ನವದೆಹಲಿ(ಅ.06): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯಿಂದ ಆರು ತಿಂಗಳು ‘ವಿನಾಯಿತಿ’ ಪಡೆದಿದ್ದ ವೈಯಕ್ತಿಕ ಸಾಲಗಾರರು ಹಾಗೂ ಸಣ್ಣ ಉದ್ದಿಮೆಗಳ ಸಾಲದ ಮೇಲಿನ ಚಕ್ರಬಡ್ಡಿಯನ್ನು (ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಆರು ತಿಂಗಳ ಅವಧಿಯ ಬಡ್ಡಿಯನ್ನೇ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಅರ್ಜಿದಾರರು ಎತ್ತಿರುವ ಹಲವು ಕಳವಳಗಳಿಗೆ ಈ ಪ್ರಮಾಣಪತ್ರದಲ್ಲಿ ಉತ್ತರವಿಲ್ಲ. ಹೀಗಾಗಿ ಈ ಕುರಿತು ಅ.13ರೊಳಗೆ ಹೊಸ ಅಫಿಡವಿಟ್‌ ಸಲ್ಲಿಸಬೇಕು ಮತ್ತು ಸಂಕಷ್ಟದಲ್ಲಿರುವ ಸಾಲಗಾರರಿಗೆ ನೆರವು ನೀಡಲು ಕೆ.ವಿ.ಕಾಮತ್‌ ಸಮಿತಿ ಗುರುತಿಸಿರುವ 26 ಕ್ಷೇತ್ರಗಳನ್ನು ತನಗೆ ತಿಳಿಸಬೇಕು ಎಂದೂ ಆದೇಶಿಸಿದೆ. ಜೊತೆಗೆ, ಕಾಮತ್‌ ಸಮಿತಿಯ ಶಿಫಾರಸಿನನ್ವಯ ಏನು ಕ್ರಮ ಕೈಗೊಂಡಿದ್ದೀರಿ ಮತ್ತು ಕೇಂದ್ರ ಸರ್ಕಾರ ಕೊರೋನಾ ವೈರಸ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದ ನಿವಾರಣೆಗೆ ಪ್ರಕಟಿಸಿರುವ ಕ್ರಮಗಳು ಎಷ್ಟುಪಾಲನೆಯಾಗಿವೆ ಎಂಬ ಬಗ್ಗೆಯೂ ವರದಿ ಸಲ್ಲಿಸಿ ಎಂದು ಕಟ್ಟಪ್ಪಣೆ ಮಾಡಿದೆ.

ಸಾಲದ ಕಂತು ಪಾವತಿಯನ್ನು ಮುಂದೂಡಿದ ಅವಧಿಯಲ್ಲೂ ಸಾಲಗಾರರ ಮೇಲೆ ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಅದನ್ನು ಒಪ್ಪಿದ ಕೇಂದ್ರ ಸರ್ಕಾರ, ಈ ಅವಧಿಯಲ್ಲಿ ಚಕ್ರಬಡ್ಡಿ ಮನ್ನಾ ಮಾಡಲಾಗುವುದು ಸುಪ್ರೀಂಕೋರ್ಟ್‌ಗೆ ಕೆಲ ದಿನಗಳ ಹಿಂದೆ ಅಫಿಡವಿಟ್‌ ಸಲ್ಲಿಸಿತ್ತು.

ಈ ಕುರಿತು ಸೋಮವಾರ ವಿಚಾರಣೆ ನಡೆದಾಗ ಮೂವರು ಜಡ್ಜ್‌ಗಳ ನ್ಯಾಯಪೀಠ ಕೇವಲ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿತು. ಇದೇ ವೇಳೆ, ರಿಯಲ್‌ ಎಸ್ಟೇಟ್‌ ಕಂಪನಿಗಳು ಕೇಂದ್ರ ಸರ್ಕಾರ ತಮಗೆ ಯಾವುದೇ ರೀತಿಯ ಆರ್ಥಿಕ ನೆರವು ನೀಡಿಲ್ಲ ಎಂದು ಆಕ್ಷೇಪಿಸಿದವು. ಜೊತೆಗೆ, ಇನ್ನೂ ಹಲವಾರು ಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಡೆಗಣಿಸಿವೆ ಎಂದು ಹಿರಿಯ ವಕೀಲರು ಆಕ್ಷೇಪಿಸಿದರು. ಅವೆಲ್ಲವನ್ನೂ ಪರಿಗಣಿಸಿದ ಸುಪ್ರೀಂಕೋರ್ಟ್‌, ಇಎಂಐಗೆ ಬಡ್ಡಿ ವಿಧಿಸುವ ವಿಚಾರದಲ್ಲಿ ಪರಿಷ್ಕೃತ ಅಫಿಡವಿಟ್‌ ಸಲ್ಲಿಸಬೇಕು ಮತ್ತು ಕೆ.ವಿ.ಕಾಮತ್‌ ವರದಿಯ ಶಿಫಾರಸುಗಳು ಹಾಗೂ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ನೆರವಿನ ಕ್ರಮಗಳು ಎಷ್ಟರಮಟ್ಟಿಗೆ ಜಾರಿಯಾಗಿವೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿ ಅ.13ಕ್ಕೆ ವಿಚಾರಣೆ ಮುಂದೂಡಿತು.

ಜೊತೆಗೆ, ಭಾರತೀಯ ಬ್ಯಾಂಕುಗಳ ಸಂಘ (ಎನ್‌ಬಿಎ), ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಒಕ್ಕೂಟ (ಕ್ರೆಡಾಯ್‌) ಹಾಗೂ ಇನ್ನಿತರ ಪಕ್ಷಗಾರರಿಗೂ ಕೇಂದ್ರ ಸರ್ಕಾರದ ಅಫಿಡವಿಟ್‌ಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿತು.