ಪೆಟ್ರೋಲ್‌, ಡೀಸೆಲ್‌ನಿಂದ ಕೇಂದ್ರಕ್ಕೆ ಬಂಪರ್‌ ಆದಾಯ!| ಏಪ್ರಿಲ್‌-ನವೆಂಬರ್‌ನಲ್ಲಿ 63 ಸಾವಿರ ಕೋಟಿ ಹೆಚ್ಚು ಗಳಿಕೆ| ಅಬಕಾರಿ ಸುಂಕ ಏರಿಕೆಯಿಂದ ಶೇ.48 ಆದಾಯ ಹೆಚ್ಚಳ

ನವದೆಹಲಿ(ಜ.18): ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ದೇಶಾದ್ಯಂತ ಜನರು ಕಂಗೆಟ್ಟಿದ್ದರೆ ಕೇಂದ್ರ ಸರ್ಕಾರಕ್ಕೆ ಮಾತ್ರ 2020ರಲ್ಲಿ ಇವುಗಳ ಮಾರಾಟದಿಂದ ಹೆಚ್ಚುವರಿಯಾಗಿ 63.5 ಸಾವಿರ ಕೋಟಿ ರು. ಆದಾಯ ಬಂದಿದೆ. ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಏರಿಕೆಯಿಂದಾಗಿ 2020ರ ಏಪ್ರಿಲ್‌-ನವೆಂಬರ್‌ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ಆದಾಯ ಶೇ.48ರಷ್ಟುಹೆಚ್ಚಳವಾಗಿದ್ದು, ಅದರ ಮೊತ್ತ ಸುಮಾರು 63.5 ಸಾವಿರ ಕೋಟಿ ರು. ಆಗುತ್ತದೆ.

ಏಪ್ರಿಲ್‌-ನವೆಂಬರ್‌ 2020ರ ಅವಧಿಯಲ್ಲಿ ತೈಲೋತ್ಪನ್ನಗಳ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ಒಟ್ಟು 1,96,342 ಕೋಟಿ ರು. ಆದಾಯ ಬಂದಿದೆ. 2019ರ ಇದೇ ಅವಧಿಯಲ್ಲಿ ಈ ಆದಾಯ 1,32,899 ಕೋಟಿ ರು. ಇತ್ತು ಎಂದು ಕಂಟ್ರೋಲರ್‌ ಜನರಲ್‌ ಆಫ್‌ ಅಕೌಂಟ್ಸ್‌ (ಸಿಜಿಎ) ವಿಭಾಗದ ಅಂಕಿಅಂಶಗಳು ಹೇಳುತ್ತವೆ. ಅಚ್ಚರಿಯೆಂದರೆ ಈ ಅವಧಿಯಲ್ಲಿ ಕೊರೋನಾ ಕಾರಣದಿಂದ ಸುಮಾರು 1 ಕೋಟಿ ಟನ್‌ನಷ್ಟುಕಡಿಮೆ ಡೀಸೆಲ್‌ ಹಾಗೂ 30 ಲಕ್ಷ ಟನ್‌ ಕಡಿಮೆ ಪೆಟ್ರೋಲ್‌ ಮಾರಾಟವಾಗಿದೆ. ಆದರೂ ಪೆಟ್ರೋಲ್‌ ಹಾಗೂ ಡೀಸೆಲ್‌ನ ಮಾರಾಟದ ಮೇಲೆ ವಿಧಿಸುವ ಅಬಕಾರಿ ಸುಂಕದಿಂದ ಸರ್ಕಾರಕ್ಕೆ ಬರುವ ಆದಾಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕಚ್ಚಾತೈಲದ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಬೆಲೆ ಇಳಿಕೆಯ ಲಾಭ ಪಡೆಯಲು ಎರಡು ಬಾರಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್‌ನ ಪ್ರತಿ ಲೀಟರ್‌ಗೆ ಒಟ್ಟು 13 ರು. ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ ಒಟ್ಟು 16 ರು. ಏರಿಕೆ ಮಾಡಿತ್ತು. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ವಿಧಿಸುವ ಅಬಕಾರಿ ಸುಂಕ ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಹಾಗೂ ವ್ಯಾಟ್‌ ತೆರಿಗೆ ರಾಜ್ಯ ಸರ್ಕಾರಕ್ಕೆ ಸಂದಾಯವಾಗುತ್ತದೆ.

ತೈಲೋತ್ಪನ್ನಗಳನ್ನು ಇನ್ನೂ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿಲ್ಲ. ಪೆಟ್ರೋಲ್‌ ಮೇಲೆ ಸದ್ಯ ಪ್ರತಿ ಲೀಟರ್‌ಗೆ 32.98 ರು. ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ ಮೇಲೆ 31.83 ರು. ಅಬಕಾರಿ ಸುಂಕ ವಿಧಿಸಲಾಗುತ್ತದೆ. 2014ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪೆಟ್ರೋಲ್‌ನ ಪ್ರತಿ ಲೀಟರ್‌ಗೆ ಅಬಕಾರಿ ಸುಂಕ 9.48 ರು. ಹಾಗೂ ಡೀಸೆಲ್‌ ಮೇಲೆ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ 3.56 ರು. ಇತ್ತು.