Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?
- ಒಲಾ S1 Pro ಕಂಪನಿ ಪ್ರಕಾರ 181 ಕಿ.ಮೀ ಮೈಲೇಜ್
- ನಿಜವಾಗಿ ಒಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ಏನು?
- ಕಂಪನಿ ಹೇಳುವ ಮೈಲೇಜ್ ಸಿಗಲು ಏನುಮಾಡಬೇಕು?
ಬೆಂಗಳೂರು(ಜ.02): ಭಾರತದಲ್ಲಿ ಒಲಾ ಎಲೆಕ್ಟ್ರಿಕ್(Ola Electric) ಸ್ಕೂಟರ್ ಭಾರಿ ಸದ್ದು ಮಾಡುತ್ತಿದೆ. ಭಾರತದ ಆಟೋಮೇಟಿವ್ ರಿಸರ್ಚ್ ಸಂಸ್ಥೆ(ARAI) ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್(Electic Scooter) ಒಲಾ. ಒಲಾ ಎರಡು ವೇರಿಯೆಂಟ್ ಸ್ಕೂಟರ್ ಪೈಕಿ S1 Pro ಸ್ಕೂಟರ್ 181 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳುತ್ತಿದೆ. ಆದರೆ ನಿಜವಾದ ಮೈಲೇಜ್ ಎಷ್ಟು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹಲವು ಗ್ರಾಹಕರು ಒಲಾ ನಿಗದಿತ ಮೈಲೇಜ್ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಒಲಾ S1 ಹಾಗೂ ಒಲಾ S1 Pro ಸ್ಕೂಟರ್ ಮೈಲೇಜ್ ಇಲ್ಲ. ಕಂಪನಿ ಹೇಳಿದ ಮೈಲೇಜ್(Scooter Range) ಹಾಗೂ ನಮಗೆ ಸಿಗುತ್ತಿರುವ ಮೈಲೇಜ್ ಅಜಗಜಾಂತರ ವ್ಯತ್ಯಾಸವಿದೆ ಎಂದು ಹಲವು ಗ್ರಾಹಕರು ದೂರಿದ್ದಾರೆ. ಈ ಕುರಿತು ಗ್ರಾಹಕರು ಹಂಚಿಕೊಂಡ ರಿಯಲ್ ಮೈಲೇಜ್ ರೇಂಜ್ ಮಾಹಿತಿ ಇಲ್ಲಿದೆ.
Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!
ಒಲಾ S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ನಗರದಲ್ಲಿ ರೈಡ್(City Ride) ಮಾಡಿದ ಪರೀಕ್ಷೆ ನಡೆಸಿದ ಗ್ರಾಹಕರಿಗೆ ಸಿಕ್ಕಿದ್ದು 100 ಕಿ.ಮೀ ಮಾತ್ರ. ಕಂಪನಿ ಹೇಳಿದ 181 ಕಿಲೋಮೀಟರ್‌ಗೂ ಗ್ರಾಹಕರಿಗೆ ಸಿಕ್ಕಿದ 100 ಕಿ.ಮೀಗೂ ಭಾರಿ ಅಂತರವಿದೆ. ನಗರದ ಟ್ರಾಫಿಕ್ ರಸ್ತೆಯಲ್ಲಿ ಪರೀಕ್ಷೆ ಮಾಡಲಾಗಿದೆ. ಒಲಾ S1 Pro ಸ್ಕೂಟರ್‌ನಲ್ಲಿ ಮೂರು ಮೊಡ್ ಇದೆ. ನಾರ್ಮಲ್ ಸ್ಪೋರ್ಟ್ಸ್ ಹಾಗೂ ಹೈಪರ್ ಮೊಡ್‌ಗಳಿವೆ. ಪರೀಕ್ಷೆ ವೇಳೆ ನಾರ್ಮಲ್ ಮೊಡ್‌ನಲ್ಲಿ ರೈಡ್ ಮಾಡಲಾಗಿದೆ. ಇನ್ನು ಸಿಗ್ನಲ್ ವೇಳೆ ಸ್ಕೂಟರ್‌ನಲ್ಲಿರುವ ಪಾರ್ಕ್ ಮೊಡ್‌ನ್ನು ಆನ್ ಮಾಡಿ ಸಿಗ್ನಲ್‌ನಲ್ಲಿ ನಿಲ್ಲಿಸಲಾಗಿದೆ.
ಮೊದಲು ಸಿಟಿ ರಸ್ತೆಯಲ್ಲಿ ರೈಡ್ ಮಾಡಿದ ಬಳಿಕ ಹೈವೇಯಲ್ಲಿ ರೈಡ್ ಮಾಡಿ ಪರೀಕ್ಷೆ ನಡೆಸಲಾಗಿದೆ. ಹೈವೇಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಸ್ಕೂಟರ್ ರೈಡ್ ಮಾಡಲಾಗಿದೆ. 93 ಕಿಲೋಮೀಟರ್ ಪ್ರಯಾಣದ ಬಳಿಕ ಸ್ಕೂಟರ್ ಚಾರ್ಚಿಂಗ್ ಶೇಕಡಾ 15ಕ್ಕೆ ಕುಸಿದಿದೆ.ಈ ವೇಳೆ ಸ್ಕೂಟರ್ ತನ್ನಷ್ಟಕ್ಕೆ ಇಕೋ ಮೊಡ್‌ಗೆ ಜಾರಲಿದೆ. ಇಕೋ ಮೊಡ್‌ನಲ್ಲಿ ಸ್ಕೂಟರ್ ವೇಗ 40 ಕಿಲೋಮೀಟರ್‌ಗಿಂತ ವೇಗವಾಗಿ ರೈಡ್ ಮಾಡಲು ಸಾಧ್ಯವಿಲ್ಲ. ಇನ್ನು ಪಿಕ್ ಅಪ್ ಇಲ್ಲವೇ ಇಲ್ಲ.
ಬ್ಯಾಟರಿ ಚಾರ್ಜ್ ಇನ್ನು ಕೇವಲ 15 ಶೇಕಡಾ ಇದೆ ಎಂದು ತೋರಿಸಿದ ವೇಳೆ ಡಿಸ್‌ಪ್ಲೇಯಲ್ಲಿ 23 ಕಿಲೋಮೀಟರ್ ದೂರ ಸಾಗಬಹುದು ಎಂದು ಒಲಾ ಸೂಚನೆ ನೀಡಿತ್ತು. ಆದರೆ 7 ಕಿ.ಮೀ ಪ್ರಯಾಣಿಸದ ಬೆನ್ನಲ್ಲೇ ಬ್ಯಾಟರಿ ಚಾರ್ಜ್ ಶೇಕಡಾ 2ಕ್ಕೆ ಕುಸಿದಿದೆ. ಈ ವೇಳೆ ಸ್ಕೂಟರ್ ಮುಂದಕ್ಕೆ ಹೋಗದೆ ನಿಂತಿದೆ. ಡಿಸ್‌ಪ್ಲೇನಲ್ಲಿ ಚಾರ್ಜ್ ಮಾಡಿ ಪ್ರಯಾಣಿಸಿ ಎಂಬ ಸೂಚನೆ ನೀಡಿದೆ. ಪೆಟ್ರೋಲ್ ಸ್ಕೂಟರ್ ಬಳಸುವ ರೀತಿ ಹೆಚ್ಚಿನ ವೇಗವಿಲ್ಲದೆ ಬಳಸಿದರೆ 100 ಕಿ.ಮೀ ದೂರ ಪ್ರಯಾಣಿಸಬಹುದು.
ಒಲಾ ಕಂಪನಿ ಹೇಳುವ ಪ್ರಕಾರ ಒಲಾ S1 Pro ಸ್ಕೂಟರ್ 135 ಕಿ.ಮೀ ಮೈಲೇಜ್ ಪಡೆಯಲು ಸಾಧ್ಯವಿದೆ. ಆದರೆ ಕಂಡೀಷನ್ ಅಪ್ಲೈ. ಈ ಮೈಲೇಜ್ ಪಡೆಯಲು ಸ್ಕೂಟರ್‌ನಲ್ಲಿ ಪಿಲಿಯನ್ ರೈಡರ್ ಅಂದರೆ ಹಿಂಬದಿ ಸವಾರ ಇರಬಾರದು, ಸವಾರನ ತೂಕ 70 ಕೆಜಿ ಮೀರಿರಬಾರದು, ಇತರ ಯಾವುದೇ ತೂಕದ ವಸ್ತುಗಳು ಇರಬಾರದು, 2 ರಿಂದ 5 ಶೇಕಡಾ ಇಳಿಜಾರು ಸೇರಿದಂತೆ ಸಮತಟ್ಟಾದ ರಸ್ತೆ ಇರಬೇಕು. ಹವಾಮಾನ ಪರಿಸ್ಥಿತಿ ಪ್ರತಿಕೂಲವಾಗರಬೇಕು. ಹೀಗಿದ್ದಲ್ಲಿ 135 ರಿಂದ 145 ಕಿ.ಮೀ ಮೈಲೇಜ್ ಸಿಗಲಿದೆ.
ಒಲಾ S1 Pro ಸ್ಕೂಟರ್‌ನಲ್ಲಿ 8.5 kW ಎಲೆಕ್ಟ್ರಿಕ್ ಮೋಟಾರು ಬಳಸಲಾಗಿದೆ. 58 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಈ ಸ್ಕೂಟರ್ 0 ಯಿಂದ 60 ಕಿ,ಮೀ ವೇಗವನ್ನು 5 ಸೆಕೆಂಡ್‌ನಲ್ಲಿ ಪಡೆಯಲಿದೆ. ಹೈಪರ್ ಮೊಡ್‌ನಲ್ಲಿ ಸ್ಕೂಟರ್ 115 km/h ಗರಿಷ್ಠ ವೇಗ ಪಡೆದುಕೊಳ್ಳಲಿದೆ. 3.97 kWh ಬ್ಯಾಟರಿ ಬಳಸಲಾಗಿದ್ದು, ನಾರ್ಮಲ್ ಚಾರ್ಜರ್ ಮೂಲಕ ಚಾರ್ಜಿಂಗ್ ಮಾಡಲು 6 ಗಂಟೆ 30 ನಿಮಿಷ ತೆಗೆದುಕೊಳ್ಳಲಿದೆ.