ಬೀದರ್: ಮಾಂಜ್ರಾ ನದಿಗೆ ಬ್ಯಾರೇಜ್ ನಿರ್ಮಿಸಲು ಸಿಎಂಗೆ ಮನವಿ
ಬೀದರ್ ತಾಲೂಕಿನ ಕಂದಗೂಳ ಮತ್ತು ಚಿಲ್ಲರ್ಗಿ ಬಳಿ ಮಾಂಜ್ರಾ ನದಿಗೆ ಬ್ಯಾರೇಜ್ ನಿರ್ಮಿಸುವಂತೆ ಸಿಎಂ ಯಡಿಯೂರಪ್ಪಗೆ ಮನವಿ|
ಒಣ ಬೇಸಾಯದಲ್ಲಿ ಕಷ್ಟ ನಷ್ಟ ಹೆಚ್ಚು| ಮಳೆ ಅಭಾವ ಸಾಮಾನ್ಯವಾಗಿದ್ದರಿಂದಲೂ ರೈತರು ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ|ಕಂದಗೂಳ ಅಥವಾ ಚಿಲ್ಲರ್ಗಿ ಬಳಿ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಿದ್ದಲ್ಲಿ ಎರಡೂ ತಾಲೂಕುಗಳ ಅಂದಾಜು 80 ಗ್ರಾಮಗಳ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ|
ಬೀದರ್[ಅ.24]: ಜಿಲ್ಲೆಯ ರೈತರು ಮಳೆಯನ್ನೆ ಅವಲಂಬಿಸಿರುವುದರಿಂದ ಬೀದರ್ ತಾಲೂಕಿನ ಕಂದಗೂಳ ಮತ್ತು ಚಿಲ್ಲರ್ಗಿ ಬಳಿ ಮಾಂಜ್ರಾ ನದಿಗೆ ಬ್ಯಾರೇಜ್ ನಿರ್ಮಿಸುವಂತೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಮನವಿ ಸಲ್ಲಿಸಿದ ಅವರು, ಬೀದರ್ ಜಿಲ್ಲೆಯ ಹೆಚ್ಚಿನ ರೈತರು ಬೇಸಾಯಕ್ಕೆ ಮಳೆಯನ್ನು ಅವಲಂಬಿಸಿರುವ ಸಂಗತಿ ತಮಗೆ ತಿಳಿದಿದೆ. ಒಣ ಬೇಸಾಯದಲ್ಲಿ ಕಷ್ಟ ನಷ್ಟ ಹೆಚ್ಚು. ಮಳೆ ಅಭಾವ ಸಾಮಾನ್ಯವಾಗಿದ್ದರಿಂದಲೂ ರೈತರು ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಮಾಂಜ್ರಾ ನದಿಯು ಬೀದರ್ ಮತ್ತು ಔರಾದ್ ತಾಲೂಕಿನ ಗಡಿಯಾಗಿ ಹರಿಯುತ್ತಿರುವುದು ತಮಗೆ ತಿಳಿದಿದೆ. ಕಂದಗೂಳ ಅಥವಾ ಚಿಲ್ಲರ್ಗಿ ಬಳಿ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಿದ್ದಲ್ಲಿ ಎರಡೂ ತಾಲೂಕುಗಳ ಅಂದಾಜು 80 ಗ್ರಾಮಗಳ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಭಾಲ್ಕಿ ತಾಲೂಕಿನ ಚಂದಾಪುರ ಬಳಿ ಬ್ಯಾರೇಜು ಇದೆ. ಈ ಬ್ಯಾರೇಜಿನ ಕೆಳಭಾಗದಲ್ಲಿ ಕೌಠಾಬಳಿ ಸಣ್ಣ ಪ್ರಮಾಣದ ಬ್ಯಾರೇಜು ಇದ್ದರೂ ಅದರಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ಚಂದಾಪುರದಿಂದ ತೆಲಂಗಾಣಗಡಿಯವರೆಗಿನ ಪ್ರದೇಶದಲ್ಲಿ ಒಂದೂ ಬ್ಯಾರೇಜು ಇಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ತೆಲಂಗಾಣಕ್ಕೆ ಹರಿದು ಹೋಗುತ್ತಿದೆ. ಚಂದಾಪುರ ಕೆಳ ಭಾಗದಲ್ಲಿ ಕಂದಗೂಳ ಚಿಲ್ಲರ್ಗಿ ಹತ್ತಿರ ಬ್ಯಾರೇಜು ನಿರ್ಮಿಸಿದ್ದಲ್ಲಿ ತೀರ ಪ್ರದೇಶದಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ನೀರಾವರಿ ಬೇಸಾಯ ಕೈಗೊಳ್ಳಲು ಸಾಧ್ಯವಿದೆ ಎಂದರು.
ರೈತರು ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಂಪನ್ನರಾಗಬಹುದು. ಜೊತೆಗೆ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡಂತೆಯೂ ಆಗುತ್ತದೆ. ಜನಪರ, ರೈತಪರ ಕಾಳಜಿ ಹೊಂದಿರುವ, ರೈತರ ಬದುಕನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ತಮ್ಮಲ್ಲಿ, ಕಂದಗೂಳ, ಚಿಲ್ಲರ್ಗಿ ಬಳಿ ಮಾಂಜ್ರಾ ಬ್ಯಾರೇಜು ಮಂಜೂರು ಮಾಡಬೇಕೆಂದು ಕೋರಿದ್ದಾರೆ. ಎರಡು ತಾಲೂಕುಗಳ 80 ಕ್ಕೂ ಹೆಚ್ಚು ಗ್ರಾಮಗಳ ರೈತರ ಬದುಕನ್ನು ಬದಲಾಯಿಸುವ ಮಹತ್ತರ ಕಾರ್ಯಕ್ಕೆ ತಾವು ಸಹಕಾರ ನೀಡುತ್ತೀರಿ ಎಂಬ ಅಚಲ ವಿಶ್ವಾಸ ಇದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೈತರ ಬದುಕನ್ನು ಗಟ್ಟಿಗೊಳಿಸುವ ಈ ಕಾರ್ಯಕ್ಕೆ ಮಂಜೂರಾತಿ ನೀಡುವೀರಿ ಎಂಬ ನಂಬಿಕೆಯೂ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಂದಗೂಳ, ಚಿಲ್ಲರ್ಗಿ ಬಳಿ ಮಾಂಜ್ರಾ ನದಿಗೆ ಬ್ಯಾರೇಜು ನಿರ್ಮಿಸುವಂತೆ ಎರಡೂ ತಾಲೂಕುಗಳ 80 ಗ್ರಾಮಗಳ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತಿದ್ದೇನೆ ಎಂದು ಮನವಿಯಲ್ಲಿ ನಮೂದಿಸಿದ್ದಾರೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಮತ್ತುಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಮುಖಂಡ ಡಿ.ಕೆ. ಸಿದ್ರಾಮ, ಶಿವರಾಜ ಗಂದಗೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಪ್ರತಾಪ ಪಾಟೀಲ್ ಉಪಸ್ಥಿತರಿದ್ದರು.