Asianet Suvarna News Asianet Suvarna News

ಬೀದರ್: ಬೇಜವಾಬ್ದಾರಿ ಅಧಿಕಾರಿಗಳ ಮೈಚಳಿ ಬಿಡಿಸಿದ ಸಚಿವ ಚವ್ಹಾಣ

ನಗರದ ಚರಂಡಿಗಳ ಸ್ವಚ್ಛತೆಗೆ 10 ದಿನ ಗಡುವು ನೀಡಿದ ಸಚಿವ ಪ್ರಭು ಚವ್ಹಾಣ| ಸಾಹಿತಿಗಳ ಮನೆಗೆ ಭೇಟಿ ವೇಳೆ ಅಶುಚಿತ್ವ ಕಂಡು ಅಸಮಾಧಾನಗೊಂಡ ಸಚಿವರು|ನಗರದ ಇನ್ನೂ ಕೆಲವು ಕಡೆಗಳಲ್ಲಿ ಅಶುಚಿತ್ವ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ|

Minister Prabhu Chauhan Angry on Irresponsible officers
Author
Bengaluru, First Published Nov 3, 2019, 1:14 PM IST

ಬೀದರ್‌[ನ.3]: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ.1 ರಂದು ನಗರದ ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮ ಹಾಕಿಕೊಂಡಿದ್ದ ವೇಳೆಯಲ್ಲಿ ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಹಾಗೂ ಬೀದರ್ ಜಿಲ್ಲಾಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಅಲ್ಲಲ್ಲಿ ಅಶುಚಿತ್ವ ಕಂಡು, ನಗರಸಭೆ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಂಪಾ ಕಡೆಗಿನ ಬ್ಯಾಂಕ್ ಕಾಲೊನಿಯ ವಾರ್ಡ ನಂ.33 ರಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಕಸವನ್ನು ಕಂಡ ಸಚಿವರು, ನಗರಸಭೆ ಪರಿಸರ ಅಭಿಯಂತರರಿಗೆ ಕರೆಮಾಡಿ ಸ್ಥಳಕ್ಕೆ ಬರಲು ಸೂಚಿಸಿದರು. ಕೆಲ ಸಮಯದ ಬಳಿಕ ಪರಿಸರ ಅಭಿಯಂತರ ಕಾಂಬಳೆ ಅವರು ಸ್ಥಳಕ್ಕೆ ಆಗಮಿಸಿದಾಗ ನೀವು ಸ್ವಚ್ಛತೆ ಮಾಡುವುದು ಹೀಗೇನಾ? ಇತ್ತೀಚೆಗಷ್ಟೇ ನಿಮಗೆ ಎಲ್ಲಾ ಕಡೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿ ಹೋಗಿದ್ದೆ. ಈಗ ಮತ್ತೆ ಅದನ್ನೇ ಮಾಡುತ್ತಿದ್ದೀರಿ. ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರ್ಮಿಕರ ಕೊರತೆಯಿಂದ ಎಲ್ಲಾ ಕಡೆಗಳಲ್ಲಿ ಸರಿಯಾದ ಸಮಯಕ್ಕೆ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿಲ್ಲ ಎಂದು ಪರಿಸರ ಅಭಿಯಂತರರು ಪ್ರತಿಕ್ರಿಯಿಸಿದರು. ಕಾರ್ಮಿಕರ ವ್ಯವಸ್ಥೆಯನ್ನು ಮಾಡಿ, ಈ ವಾರ್ಡನಲ್ಲಿ ಐದು ದಿನದೊಳಗೆ ಸ್ವಚ್ಛತೆ ಕಾರ್ಯ ಮುಗಿಯಬೇಕು ಎಂದು ಸಚಿವರು ಪರಿಸರ ಅಭಿಯಂತರಿಗೆ ನಿರ್ದೇಶನ ನೀಡಿದರು. 

ಮತ್ತೆ 10 ದಿನಗಳ ಗಡುವು: 

ಸಾಹಿತಿಗಳ ಮನೆಗೆ ಭೇಟಿ ನೀಡುವ ವೇಳೆ ಗಾಂಧಿಗಂಜ್‌ ಕೈಗಾರಿಕಾ ಪ್ರದೇಶದಲ್ಲಿ ವಾರ್ಡ್ ನಂ.21 ರಲ್ಲಿನ ಗಟಾರನ್ನು ಸಚಿವರು ನೋಡಿದರು. ಇದು ಬಹು ವರ್ಷಗಳಿಂದ ಹೀಗೆಯೇ ಇದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ನಮಗೆ ಡೆಂಘೀ ಕಾಯಿಲೆ ಬರುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರಿದರು. ಆಗ ಸ್ಥಳದಲ್ಲೇ ನಗರಸಭೆ ಪೌರಾಯುಕ್ತರಿಗೆ ಕರೆ ಮಾಡಿದ ಸಚಿವರು, ನಗರದ ಇನ್ನೂ ಕೆಲವು ಕಡೆಗಳಲ್ಲಿ ಅಶುಚಿತ್ವ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ತಾವು ಗಮನಹರಿಸಬೇಕು. ಜಿಲ್ಲೆಯ ಎಲ್ಲಾಕಡೆಗಳಲ್ಲಿನ ಎಲ್ಲಾ ಚರಂಡಿಗಳು ಬರುವ 10 ದಿನಗಳೊಳಗೆ ಕಡ್ಡಾಯ ಸರಿ ಹೋಗಬೇಕು ಎಂದು ಸಚಿವರು ಗಡುವು ವಿಧಿಸಿದರು.

ವಾಟ್ಸ್ ಅಪ್‌ಗೆ ಫೋಟೋ ಹಾಕಿ:

ಪ್ಲಾಸ್ಟಿಕ್ ಹಾಗೂ ಇನ್ನಿತರ ಕೊಳೆಯಿಂದ ತುಂಬಿಕೊಂಡ ಚರಂಡಿಗಳನ್ನು ಸರಿಪಡಿಸುವ ಕಾರ್ಯವು ನಡೆಯುತ್ತಿದೆಯೋ ಇಲ್ಲವೋ ಎಂಬುವದನ್ನು ನಾನು ನೋಡಬೇಕು. ನೀವು ಒಂದು ಕಡೆ ಶುಚಿಗೊಳಿಸಿ ಉಳಿದ ಕಡೆ ಹಾಗೆಯೇ ಬಿಟ್ಟರೆ ನಡೆಯೊಲ್ಲ. ನಗರದ ಎಲ್ಲಾ ಕಡೆಗಳಲ್ಲಿ ಸ್ವಚ್ಛತಾ ಕಾರ್ಯವು ಯುದ್ದೋಪಾದಿಯಲ್ಲಿ ನಡೆಯಬೇಕು. ಆದ್ದರಿಂದ ನಗರದ ಯಾವ ಯಾವ ಕಡೆಗಳಲ್ಲಿ ಚರಂಡಿಗಳ ಶುಚಿ ಮಾಡುತ್ತೀರಿ ಅದರ ಫೋಟೊ ತೆಗೆದು ವಾಟ್ಸ್ ಅಪ್‌ನಲ್ಲಿ ಹಾಕಬೇಕು ಎಂದು ಸಚಿವರು ನಗರಸಭೆ ಪೌರಾಯುಕ್ತರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಸೂಚಿಸಿದರು.
 

Follow Us:
Download App:
  • android
  • ios