ಬೀದರ್, [ಅ.22]: 200 ರೂಪಾಯಿ ಹಣದ ವಿಷಯಕ್ಕೆ ನಡೆದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಧರಿ ಗ್ರಾಮದ ಹತ್ತಿರವಿರುವ ಸೂಪರ್ ಡಾಬಾದಲ್ಲಿ ನಡೆದಿದೆ.

ಸೂಪರ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ (48) ಕೊಲೆಯಾದ ವ್ಯಕ್ತಿ. ಕೊಲೆಯಾದ ಇಸ್ಮಾಯಿಲ್,  ಮೈಲಾರಿಗೆ ಎಂಬಾತನಿಗೆ 200 ರೂ. ಸಾಲ ಕೊಡಬೇಕಿತ್ತು.  ಈ ಸಾಲವನ್ನು ಮೈಲಾರಿ ಕೇಳಿದ್ದ. ಆದ್ರೆ, ಇಸ್ಮಾಯಿಲ್ ಮೈಲಾರಿಯನ್ನ ನಿಂದಿಸಿ ಹಣ ಕೊಡವುದಿಲ್ಲ ಎಂದಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದ್ರಿಂದ ಕೋಪಗೊಂಡ ಮೈಲಾರಿ ಚಾಕುವಿನಿಂದ ಇಸ್ಮಾಯಿಲ್ ಗೆ ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ ಕಲಬುರಗಿ-ಬೀದರ್ ರಸ್ತೆ ಮಧ್ಯೆ  ಶವವಿಟ್ಟು ಅಪಘಾತ ಎಂಬಂತೆ ಬಿಂಬಿಸಲು ಮುಂದಾಗಿದ್ದ.

ಆದ್ರೆ, ಪೊಲೀಸರು ಶವದ ಕುತ್ತಿಗೆ ಮೇಲಿನ ಗಾಯ ನೋಡಿ ಮೈಲಾರಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಮಾಯಿಲ್ ಹಾಗೂ ಮೈಲಾರಿ ಇಬ್ಬರೂ ಕಲಬುರಗಿ ಮೂಲದವರಾಗಿದ್ದು, ಹುಮ್ನಾಬಾದ್ ತಾಲೂಕಿನ ಧರಿ ಗ್ರಾಮದ ಹತ್ತಿರವಿರುವ ಸೂಪರ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.