ಬೆಂಗಳೂರು :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಜ.12ರ ಬೆಳಗ್ಗೆ 11.30ಕ್ಕೆ ಗಡಿಪ್ರದೇಶವಾದ ‘ಅತ್ತಿಬೆಲೆ’ ಬಂದ್‌ ಮಾಡಲಾಗುವುದು ಎಂದು ಕನ್ನಡ ಚಳವಳಿ ಮುಖಂಡ ವಾಟಾಳ್‌ ನಾಗರಾಜ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮುಖಂಡರು ಇತ್ತೀಚೆಗೆ ಮೇಕೆದಾಟಿಗೆ ನುಗ್ಗಲು ಪಾದಯಾತ್ರೆ ಮಾಡಿರುವುದು ಖಂಡನೀಯ. ಈ ನಿಲುವು ಖಂಡಿಸಿ ತಮಿಳುನಾಡು ಹಾಗೂ ಕರ್ನಾಟಕ ಗಡಿ ಬಂದ್‌ ಮಾಡಲಾಗುವುದು. ಮೇಕೆದಾಟು ಯೋಜನೆಗೆ ತಮಿಳುನಾಡಿನ ಮುಖಂಡರು ಅಡ್ಡಿಪಡಿಸುತ್ತಿರುವುದರಲ್ಲಿ ಅರ್ಥವಿಲ್ಲ. ಈ ಯೋಜನೆ ವಿರೋಧಿಸಲು ತಮಿಳುನಾಡಿಗೆ ಯಾವುದೇ ಅಧಿಕಾರವಿಲ್ಲ ಎಂದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಕುರಿತಂತೆ ನೀಲಿನಕ್ಷೆ ತಯಾರಿಸಬೇಕು. ಈ ಯೋಜನೆಗೆ ಎಷ್ಟುಹಣ ಖರ್ಚಾಗುತ್ತದೆ, ಎಷ್ಟುವರ್ಷದಲ್ಲಿ ಯೋಜನೆ ಮುಗಿಯಲಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಕೆ.ಆರ್‌.ಕುಮಾರ್‌, ಮಂಜುನಾಥ್‌ ದೇವ್‌, ಗಿರೀಶ್‌ಗೌಡ ಇನ್ನಿತರರು ಇದ್ದರು.

ಶಂಕು ಸ್ಥಾಪನೆಗೆ 15 ದಿನ ಗಡುವು

ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ 15 ದಿನದೊಳಗೆ ಶಂಕುಸ್ಥಾಪನೆ ಮಾಡದಿದ್ದರೆ ತಾವೇ ಸ್ಥಳಕ್ಕೆ ಸಿಮೆಂಟ್‌, ಜಲ್ಲಿಕಲ್ಲು ಮುಂತಾದವುಗಳನ್ನು ತೆಗೆದುಕೊಂಡು ಹೋಗಿ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗುವುದು ಎಂದು ವಾಟಾಳ್‌ ನಾಗರಾಜ್‌ ತಿಳಿಸಿದರು.

ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆ ಕೈ ಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.