ಬೆಂಗಳೂರು :  ಬೆಸ್ಕಾಂ ಪ್ರಕಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗಿಲ್ಲ. ಆದರೂ ತಾಂತ್ರಿಕ ಸಮಸ್ಯೆ ಕಾರಣ ನೀಡಿ ಮಾಡುತ್ತಿರುವ ಅನಿಯಮಿತ ವಿದ್ಯುತ್ ಕಡಿತಗಳಿಗೆ ಮಿತಿ ಇಲ್ಲ. ಹೌದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವ ಮುನ್ಸೂಚನೆಯೂ ಇಲ್ಲದೆ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಹರಿದು ಬರುತ್ತಿವೆ. 

ನಗರದಲ್ಲಿ ಲೋಡ್‌ಶೆಡ್ಡಿಂಗ್ ಅಧಿಕೃತವಾಗಿ ಜಾರಿಯಾ ಗದಿದ್ದರೂ ಬೇಸಿಗೆಗೂ ಮೊದಲೇ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ. ನಗರದ ಹಲವು ಪ್ರದೇಶಗಳಲ್ಲಿ ಗಂಟೆಗಟ್ಟಲೇ ವಿದ್ಯುತ್ ಕಡಿತ ಉಂಟಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಸ್ಕಾಂ ವರದಿ ಪ್ರಕಾರವೇ, ಜ.15ರಂದು ಮಂಗಳವಾರ 39 ಪ್ರಕರಣಗಳಲ್ಲಿ 100 ಕ್ಕೂ ಹೆಚ್ಚು ಪ್ರದೇಶದಲ್ಲಿ ಒಟ್ಟು 45 ಗಂಟೆ ವಿದ್ಯುತ್ ಕಡಿತಗೊಳಿಸಲಾಗಿದೆ.

ಇದಕ್ಕೆ ತಾಂತ್ರಿಕ ನಿರ್ವಹಣೆ ಕಾರಣ ನೀಡಿದ್ದು, ಜ.16 ರಂದು ಭಾನುವಾರವೂ ಇದೇ ರೀತಿ ವಿದ್ಯುತ್ ಕಡಿತ ವರದಿಯಾಗಿದೆ. ಜ. 16ರಂದು ಬೆಸ್ಕಾಂಗೆ ಒಟ್ಟು  5,194 ದೂರುಗಳು ಬಂದಿದ್ದು, 2,313 ದೂರುಗಳು ಬೆಂಗಳೂರಿ ನಿಂದಲೇ ಬಂದಿವೆ. ಇವುಗಳಲ್ಲಿ ಬಹುತೇಕ ದೂರುಗಳು ವಿದ್ಯುತ್ ಕಡಿತಕ್ಕೆ ಸಂಬಂಧಿಸಿದವು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಬೆಂಗಳೂರಿಗೆ ನಿತ್ಯ 22 ರಿಂದ 23 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. 

ಆದರೆ ನಿಯಮಿತವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದೆ. ಬುಧವಾರ ಬೆಳಗ್ಗೆ 7 ರಿಂದ 9 ರವರೆಗೆ ಹೆಬ್ಬಾಳದ ಕೆಂಪಾಪುರ, ಕಾಫಿ ಬೋರ್ಡ್ ಬಡಾವಣೆ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಕಚೇರಿಗೆ ತೆರಳುವ ಸಮಯದಲ್ಲಿ ವಿದ್ಯುತ್ ಕಡಿತ ಉಂಟಾಗುವುದರಿಂದ ತೀವ್ರ ಸಮಸ್ಯೆ ಎದುರಾಗುತ್ತಿದೆ.

ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದರೆ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡುತ್ತಾರೆ. ಕೆಲವು ಸಮಯದಲ್ಲಿ ಬೆಸ್ಕಾಂ ಸಂಪರ್ಕಿಸಲೇ ಸಾಧ್ಯವಾಗುವುದಿಲ್ಲ ಎಂದು ಕಾಫಿ ಬೋರ್ಡ್ ಬಡಾವಣೆ ನಿವಾಸಿ ಪ್ರಶಾಂತ್ ದೂರುತ್ತಾರೆ. ತಾಂತ್ರಿಕ ಸಮಸ್ಯೆ ನೆಪ: ಬೆಸ್ಕಾಂ ಪ್ರಕಾರ ಯಾವುದೇ ಅಧಿಕೃತ ಲೋಡ್‌ಶೆಡ್ಡಿಂಗ್ ಇಲ್ಲ. ಆದರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ವಿದ್ಯುತ್ ಕಡಿತ ಮಾಡುವುದು ಹೆಚ್ಚಾಗುತ್ತಿದೆ. ಜ. 15 ರಂದು ರಾಜಗೋಪಾಲನಗರ ಮುಖ್ಯರಸ್ತೆ, ಪೀಣ್ಯ 3ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬರೋಬ್ಬರಿ 5 ಗಂಟೆ ವಿದ್ಯುತ್ ಕಡಿತ ಉಂಟಾಗಿದೆ. ಇಬ್ಬಲೂರು ಸುತ್ತಮುತ್ತಲಿನ ಪ್ರದೇಶದಲ್ಲಿ 3.53  ಗಂಟೆ, ದೇವರಾಜ ಅರಸು ಬಡಾವಣೆ, ವಿನೋಭಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 2 ಗಂಟೆ, ಹೊಸಕೆರೆಹಳ್ಳಿ, ಇಟ್ಟಮಡು, ಗುರುದತ್ತ ಬಡಾವಣೆ, ಟಿ.ಜಿ. ಬಡಾವಣೆ, ರಾಮಕೃಷ್ಣ ಬಡಾವಣೆ, ಕಾವೇರಿನಗರ ಸುತ್ತಮುತ್ತಲಿನ ಪ್ರದೇಶದಲ್ಲಿ 2.10 ಗಂಟೆ, ಕಗ್ಗಲಿಪುರ, ಅಗರ ಸುತ್ತಮುತ್ತಲಿನ ಪ್ರದೇಶದಲ್ಲಿ 2 ಗಂಟೆ ಹೀಗೆ 39 ಪ್ರಕರಣದಲ್ಲಿ ವಿದ್ಯುತ್ ಕಡಿತಗೊಳಿಸಿ ಗಂಟೆಗಟ್ಟಲೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.