ಬೆಂಗಳೂರು[ಫೆ.23]: ಮಹತ್ವಾಕಾಂಕ್ಷೆ ಯೋಜನೆಯಾದ ಬೆಂಗಳೂರು ಸಬರ್ಬನ್‌ (ಉಪನಗರ) ರೈಲ್ವೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ವಿಧಿಸಿದ್ದ ಹಲವು ಷರತ್ತುಗಳನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದು, ಇದುವರೆಗೆ ಎದುರಾಗಿದ್ದ ಅಡಚಣೆ ನಿವಾರಣೆಯಾದಂತಾಗಿದೆ.

ಪರಿಣಾಮ, ಸಬರ್ಬನ್‌ ರೈಲ್ವೆ ಯೋಜನೆಗೆ ಶೀಘ್ರದಲೇ ಶಂಕುಸ್ಥಾಪನೆ ನೆರವೇರಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸುವ ನಿರೀಕ್ಷೆಯಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡಿ ಸುದೀರ್ಘ ಸಮಾಲೋಚನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸಂಸದರಾದ ಪಿ.ಸಿ.ಮೋಹನ್‌, ರಾಜೀವ್‌ ಚಂದ್ರಶೇಖರ್‌, ಕುಪೇಂದ್ರ ರೆಡ್ಡಿ, ಶಾಸಕರಾದ ಅರವಿಂದ ಲಿಂಬಾವಳಿ, ಲೇಹರ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ಸಭೆಯ ನಂತರ ಮಾತನಾಡಿದ ಪಿಯೂಷ್‌ ಗೋಯೆಲ್‌, ವಿಶ್ವದ ಗಮನ ಸೆಳೆದಿರುವ ಬೆಂಗಳೂರಿಗೆ ಸಬರ್ಬನ್‌ ರೈಲು ಯೋಜನೆ ಜಾರಿಗೆ ಕೇಂದ್ರವು ಮುಕ್ತವಾಗಿದೆ. ಆದರೆ, ರಾಜ್ಯ ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಯೋಜನೆ ಜಾರಿಗೆ ಅಡ್ಡಿಯಾಗಿತ್ತು. ಈ ಬಗ್ಗೆ ಮೊದಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಚರ್ಚಿಸಿದ್ದೆ. ಇದೀಗ ಸಿಎಂ ಕುಮಾರಸ್ವಾಮಿ ಜತೆಯಲ್ಲಿಯೂ ಮಾತುಕತೆ ನಡೆಸಿದ್ದೇನೆ. ಚರ್ಚೆಯ ವೇಳೆ ಮುಖ್ಯಮಂತ್ರಿಗಳು ಷರತ್ತುಗಳನ್ನು ರದ್ದು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಆರು ಸಾವಿರ ಕೋಟಿ ರು. ಮೌಲ್ಯದ ಭೂಮಿಯನ್ನು ವರ್ಷಕ್ಕೆ ಒಂದು ರು. ಗುತ್ತಿಗೆಯಂತೆ ಕೊಡುತ್ತಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಭೂಸ್ವಾಧೀನ ಕಷ್ಟಕರವಾಗಿದೆ. ಹೀಗಾಗಿ ಎತ್ತರಿಸಿದ ಮಾರ್ಗ, ಸಾಧಾರಣ ಮಾರ್ಗ ಎರಡೂ ಪ್ರಕಾರದಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಅನಂತ್‌ ನೆನದು ಭಾವುಕ:

ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ಅವರನ್ನು ನೆನೆದು ಭಾವುಕರಾದ ಪಿಯೂಷ್‌, ಬೆಂಗಳೂರು ಸಬರ್ಬನ್‌ ರೈಲು ಯೋಜನೆಯು ಅನಂತಕುಮಾರ್‌ ಅವರ ಕನಸಾಗಿತ್ತು. ಅವರ ಸೋದರನಾಗಿ ಅವರ ಕನಸು ನನಸು ಮಾಡುತ್ತೇನೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ನಗರದ ಸಬರ್ಬನ್‌ ರೈಲ್ವೆ ಯೋಜನೆಯ ಅಂತಿಮ ರೂಪುರೇಷೆ ನಿರ್ಧಾರ ಮಾಡಬೇಕಿರುವ ಕಾರಣ ದಿಢೀರ್‌ ಸಭೆ ಮಾಡಲಾಗಿದೆ. 1995ರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಾಥಮಿಕ ಚರ್ಚೆ ಆರಂಭವಾಗಿತ್ತು. 2016ರಿಂದ ಈ ಯೋಜನೆ ಬಗ್ಗೆ ಪಿಯೂಷ್‌ ಗೋಯಲ್‌ ಹಲವಾರು ಬಾರಿ ರಾಜ್ಯ ಸರ್ಕಾರ ಜತೆ ಚರ್ಚೆ ನಡೆಸುತ್ತಲೇ ಇದ್ದಾರೆ. ಈ ಯೋಜನೆ ಜಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸುಧೀರ್ಘ ಚರ್ಚೆ ನಡೆಸಲಾಗಿದೆ ಎಂದರು.

ಬೆಂಗಳೂರಿಗೆ ಶೀಘ್ರದಲ್ಲಿಯೇ ಸಬರ್ಬನ್‌ ರೈಲು ಬರಲಿದೆ. ಯೋಜನೆಯ ಶಂಕು ಸ್ಥಾಪನೆಗೆ ಪ್ರಧಾನಿಗಳನ್ನು ಕರೆಸಲು ಪಿಯೂಷ್‌ ಗೋಯೆಲ್‌ಗೆ ಮನವಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಚಿವರು ಪ್ರಧಾನಿಗಳೊಂದಿಗೆ ಮಾತನಾಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.

160 ಕಿ.ಮೀ. ಉದ್ದದ ಯೋಜನೆಯಲ್ಲಿ 83 ನಿಲ್ದಾಣಗಳು ಇರಲಿವೆ. 12 ಕಡೆ ಮೆಟ್ರೋ ಮಾರ್ಗಕ್ಕೆ ಅಡ್ಡವಾಗಿ ಹಾದು ಹೋಗಲಿದೆ. ಉಪನಗರ ರೈಲು ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಇದೆ.

ರಾಜಕೀಯ ಪರಿಸ್ಥಿತಿ ಪ್ರಸ್ತಾಪ

ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಸೂಚ್ಯವಾಗಿ ಪ್ರಸ್ತಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಬಲ್‌ ಎಂಜಿನ್‌ನಂತೆ ಕಾರ್ಯನಿರ್ವಹಿಸಬೇಕು. ರಾಜ್ಯದ ಜನತೆ ಇನ್ನೊಂದು 10 ಸ್ಥಾನ ಹೆಚ್ಚು ನೀಡಿದ್ದರೆ (ಬಿಜೆಪಿಗೆ) ಡಬ್ಬಲ್‌ ಎಂಜಿನ್‌ನಂತೆ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಕ್ಕು ಸುಮ್ಮನಾದರು.

ಆರ್‌ಸಿ ಸ್ವಾಗತ

ಸಬರ್ಬನ್‌ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಎದುರಾಗಿದ್ದ ಸಮಸ್ಯೆಗಳ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚಿಸಿ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹ ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ನಗರದ ಜನತೆಗೆ ಪ್ರಯೋಜನವಾಗಲಿರುವ ಯೋಜನೆಗೆ ಇದ್ದ ಅಡ್ಡಿ-ಆಂತಕಗಳ ನಿವಾರಣೆಗಾಗಿ ಮಾತುಕತೆ ನಡೆಸಿದ ಮುಖಂಡರಿಗೆ ಧನ್ಯವಾದಗಳು. 23 ಸಾವಿರ ಕೋಟಿ ರು. ವೆಚ್ಚದ ಯೋಜನೆಯು ಅದಷ್ಟುಬೇಗ ಜಾರಿಯಾಗಲಿ ಎಂದು ಆಶಿಸಿದ್ದಾರೆ.

ನಾಗರಿಕರ ಮೂರು ದಶಕಗಳ ಬೇಡಿಕೆಯಾಗಿದ್ದ ಉಪನಗರ ರೈಲು ಯೋಜನೆ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಯೋಜನೆಗೆ ಅಡ್ಡಿಯಾಗಿದ್ದ ತೊಡಕುಗಳನ್ನು ಬಗೆಹರಿಸಿದ್ದಕ್ಕಾಗಿ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು ಎಂದು ಸಂಸದ ಪಿ.ಸಿ.ಮೋಹನ್‌ ತಿಳಿಸಿದ್ದಾರೆ.

‘ವಂದೇ ಮಾತರಂ’ ಬೆಂಗಳೂರು ಸಂಪರ್ಕ

ಇನ್ನು ದೇಶದಾದ್ಯಂತ 100ಕ್ಕೂ ಹೆಚ್ಚು ಸೆಮಿ ಸ್ಪೀಡ್‌ ರೈಲುಗಳು ಜಾರಿಯಾಗಲಿವೆ. ವಂದೇ ಭಾರತ ರೈಲುಗಳ ಮೂಲಕ ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಮುಂಬೈ ನಗರಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.