ಅತ್ಯಾಚಾರ ಆರೋಪ ಸಂಬಂಧ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್ ರದ್ಧಾಗಿದೆ.
ಬೆಂಗಳೂರು : ಅತ್ಯಾಚಾರ ಆರೋಪ ಸಂಬಂಧ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ರಾಮನಗರದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರೆಂಟ್‌ಅನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್ ರದ್ದುಪಡಿಸುವಂತೆ ನಿತ್ಯಾನಂದ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯಪೀಠವು 2018ರ ನವೆಂಬರ್‌ನಲ್ಲಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲು ಕೋರಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ, ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು.
ಚಾರ್ತುಮಾಸ್ಯದಲ್ಲಿ ಭಾಗವಹಿಸಿದ್ದರಿಂದ ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ ನಿತ್ಯಾನಂದ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಅರ್ಜಿ ತಿರಸ್ಕಾರದ ಸಕಾರಣಗಳನ್ನು ಆದೇಶದಲ್ಲಿ ದಾಖಲು ಮಾಡಿಲ್ಲ. ಆದ್ದರಿಂದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಲು ಅರ್ಹವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
