ಬೆಂಗಳೂರು: ಕೆಲವೇ ದಿನದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಿಸಿಕೊಳ್ಳಬಹುದಾದ ಇಂಧನಗಳಿಂದಲೇ ಸಂಪೂರ್ಣ ವಿದ್ಯುತ್ ಪಡೆದುಕೊಳ್ಳಲಿದೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ತಿಳಿಸಿದರು.

ಬಿಐಎಎಲ್‌ನಲ್ಲಿ ಸನ್‌ಶಾಟ್‌ನಿಂದ ನಿರ್ಮಿಸಲಾದ ಸೌರಶಕ್ತಿ ಘಟಕವನ್ನು ಬುಧವಾರ ಉದ್ಘಾಟಿಸಿದ ಅವರು, ವಿಮಾನ ನಿಲ್ದಾಣದಲ್ಲಿರುವ ಕಟ್ಟಡದ ಛಾವಣೆಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಶೇ.67 ರಷ್ಟು ವಿದ್ಯುತ್ ಅನ್ನು ಸ್ವಂತವಾಗಿ
ಉತ್ಪಾದಿಸಲಾಗುತ್ತಿದೆ.2020 ರ ವೇಳೆಗೆ ಶೇ.100 ರಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಇದೆ ಎಂದರು. 

ಆರು ತಿಂಗಳಲ್ಲಿ ಈ ಘಟಕವನ್ನು ನಿರ್ಮಿಸಲಾಗಿದ್ದು, ಇದರಿಂದ ಬಿಐಎಎಲ್‌ಗೆ ನಿತ್ಯ 3.35 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ವಾರ್ಷಿಕವಾಗಿ ಘಟಕದಿಂದ 4.7 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದರು. 

ಮಾದರಿ ವಿಮಾನ ನಿಲ್ದಾಣ ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮತ್ತು ಮಳೆ ನೀರಿನ ಸಂಗ್ರಹಣೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದು ಮಾರರ್ ವಿವರಿಸಿದರು.

ಸನ್‌ಶಾಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ದಾಸರಿ, ಬೆಂಗಳೂರಿನಂತ ನಗರದ ವಾತಾವರಣದಲ್ಲಿ ಸೌರಶಕ್ತಿಯನ್ನು ಹೆಚ್ಚು ಉತ್ತಮವಾಗಿ ಬಳಸಿಕೊಳ್ಳಬಹುದು. ನಾವು ಈ ಘಟಕಕ್ಕೆ ಅತ್ಯಂತ ಸುಧಾರಿತ ತಂತ್ರಜ್ಞಾನ, ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಮೊನೊ ಪಾರ್ಕ್ ಮಾದರಿಗಳನ್ನು ಬಳಸಿದ್ದೇವೆ ಎಂದರು.