ಬೆಂಗಳೂರು [ಅ.11]:  ವಿಧಾನಸಭೆಯಲ್ಲಿ ಗುರುವಾರ ರೇವಣ್ಣ ಅವರ ನಿಂಬೆ ಹಣ್ಣು ಕುರಿತ ಸ್ವಾರಸ್ಯಕರ ಚರ್ಚೆ ಸದನವನ್ನು ಕೆಲ ನಿಮಿಷ ನಗೆಗಡಲಲ್ಲಿ ತೇಲುವಂತೆ ಮಾಡಿತು.

ವಿಪಕ್ಷ ನಾಯಕ ಸಿದ್ದರಾಮಯ್ಯ ನೆರೆ ಹಾನಿ ಕುರಿತು ಮಾತನಾಡುತ್ತಿರುವಾಗ ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಸದನಕ್ಕೆ ಆಗಮಿಸಿದರು. ಈ ವೇಳೆ ಸದನದ ಮೂಲೆಯೊಂದರಿಂದ ರೇವಣ್ಣ ಅವರ ಹೆಸರಿನ ಜತೆ ನಿಂಬೆಹಣ್ಣಿನ ಪ್ರಸ್ತಾಪ ತೇಲಿ ಬಂತು. ‘ಆಗ ರೇವಣ್ಣ, ನನ್ನ ನಿಂಬೆಹಣ್ಣನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಕೊಟ್ಟಿದ್ದೇನೆ. ಅವರು ವಿಜಯದಶಮಿಯ ದಿನ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ‘ರಫೇಲ್‌’ ಯುದ್ಧ ವಿಮಾನದ ಪೂಜೆ ವೇಳೆ ವಿಮಾನದ ವೇಳೆ ಮತ್ತು ಚಕ್ರಗಳಿಗೆ ಇಟ್ಟಿದ್ದರು’ ಎಂದು ಕಿಚಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗ, ಸಿದ್ದರಾಮಯ್ಯ ಮಾತನಾಡಿ, ‘ರೇವಣ್ಣ ನನಗೊಂದು ನಿಂಬೆಹಣ್ಣು ಕೊಡಪ್ಪ ಒಳ್ಳೇದಾಗ್ಲಿ ಅಂತ’ ಎಂದರು. ಅದಕ್ಕೆ ಸ್ಪೀಕರ್‌, ನನಗೇನೋ ರೇವಣ್ಣ ಈಗಾಗಲೇ ನಿಮಗೆ ನಿಂಬೆಹಣ್ಣು ಕೊಟ್ಟಿದ್ದಾರೆ ಎನಿಸುತ್ತದೆ ಎನ್ನುವ ಮೂಲಕ ಅದರಿಂದಲೇ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನೇಮಕಗೊಂಡಿರಬೇಕೆಂದು ಪರೋಕ್ಷವಾಗಿ ಕಾಲೆಳೆದರು.