ಬೆಂಗಳೂರು :  ಸಾರ್ವಜನಿಕ ರಸ್ತೆಯಲ್ಲಿ ಶವ ಸಂಸ್ಕಾರ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಚನ್ನಕೇಶವ ನಗರದ ಪರಪ್ಪನ ಅಗ್ರಹಾರ ರಸ್ತೆಯ ಮೊದಲ ತಿರುವಿನ ನಿವಾಸಿ ಜಿ.ನಾಗರಾಜ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ, ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಿಂಗಸಂದ್ರ ಗ್ರಾಮದ ಹೊಸೂರು ಮುಖ್ಯ ರಸ್ತೆಯ ನಿವಾಸಿ ಪಾಪ ರೆಡ್ಡಿ ಅವರು, ತಮ್ಮ ತಂದೆಯ ಶವವನ್ನು ತಮ್ಮ ಮನೆಯ ಪೂರ್ವ ಭಾಗಕ್ಕಿರುವ ಸಾರ್ವಜನಿಕ ರಸ್ತೆಯಲ್ಲಿ ಸಂಸ್ಕಾರ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ವಿವಾದಿತ ಸ್ಥಳ ಸಾರ್ವಜನಿಕ ಸ್ಥಳ ಹೌದೊ ಅಲ್ಲವೊ ಎಂಬುದರ ಮಾಹಿತಿ ಪಡೆದು ಮುಂದಿನ ವಿಚಾರಣೆ ತಿಳಿಸುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು.