ಬೆಂಗಳೂರು :  ಬೇಸಿಗೆ ಬಿಸಿಲ ಝಳದ ಪರಿಣಾಮವೋ ಏನೋ ಎಂಬಂತೆ ರಾಜಧಾನಿ ಮೇಲೂ ವ್ಯಕ್ತವಾಗಿದ್ದು, ಸೋಮವಾರ ಜ್ಞಾನಭಾರತಿ ಆವರಣ ಸೇರಿದಂತೆ ನಗರದ 10 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ದುರಂತಗಳು ಸಂಭವಿಸಿವೆ. 

ಈ ಪೈಕಿ ಹೆಬ್ಬಾಳ ಸಮೀಪದ ಬ್ಯಾಟರಾಯನಪುರದ ಗುಜರಿ ವಸ್ತುಗಳ ಅಂಗಡಿಯಲ್ಲಿ ನಾಲ್ಕು ಹಳೆ ಬೈಕ್ ಗಳು ಸಂಪೂರ್ಣವಾಗಿ ಆಗ್ನಿಗೆ ಆಹುತಿಯಾಗಿವೆ. ಇದರ ಹೊರತುಪಡಿಸಿದರೆ ಯಾವುದೇ ರೀತಿಯ ಆಸ್ತಿ ಪಾಸ್ತಿ ಮತ್ತು ಪ್ರಾಣಹಾನಿಯಾಗಿಲ್ಲ. ಘಟನೆ ವಿಚಾರ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. 

ನಾಗರಬಾವಿ, ಬಾಣಸವಾಡಿ, ಜ್ಞಾನಭಾರತಿ, ಬೆಳ್ಳಂದೂರು ಸಮೀಪದ ಕಸುವನಹಳ್ಳಿ, ಅಂಜನಾಪುರ, ಮಹದೇವಪುರ, ಜಯನಗರ, ವೈಟ್‌ಫೀಲ್ಡ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಸುಂಕದಕಟ್ಟೆ, ಬೇಗೂರು ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಅಗ್ನಿ ದುರಂತಗಳು ನಡೆದಿವೆ.