ಬೆಂಗಳೂರು :  ಹುಡುಗಿಯರನ್ನು ಅಕ್ರಮವಾಗಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಗಾಂಧಿನಗರದಲ್ಲಿನ ಡಿಸ್ಕೋಥೆಕ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಡಿಸ್ಕೋಥೆಕ್‌ ಮಾಲಿಕನನ್ನು ಬಂಧಿಸಿದ್ದಾರೆ.

ಮಂಗಳೂರು ಮೂಲದ ತೊಕ್ಕೊಟ್ಟು ನಿವಾಸಿ ಸುದೇಶ್‌ (32) ಬಂಧಿತ ಡಿಸ್ಕೋಥೆಕ್‌ ಮಾಲಿಕ. ದಾಳಿ ವೇಳೆ ಹೊರ ರಾಜ್ಯದಿಂದ ಕರೆ ತಂದಿದ್ದ 28 ಮಹಿಳೆಯರನ್ನು ರಕ್ಷಿಸಲಾಗಿದೆ.

ಉಪ್ಪಾರಪೇಟೆ ಠಾಣಾ ಸರಹದ್ದಿನ ಗಾಂಧಿನಗರದಲ್ಲಿ ‘ಫೋರ್ಟ್‌ ಆಫ್‌ ಪೆವಿಲಿಯನ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ ನಡೆಸಲಾಗುತ್ತಿತ್ತು. ಇಲ್ಲಿ ಅಕ್ರಮವಾಗಿ ಮಹಿಳೆಯನ್ನು ಇರಿಸಿಕೊಂಡು ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡಿಸ್ಕೋಥೆಕ್‌ ನಡೆಸಲಾಗುತ್ತಿತ್ತು. 
ಡಿಸ್ಕೋಥೆಕ್‌ಗೆ ಬರುವ ಗ್ರಾಹಕರಿಗೆ ಕಪಲ್‌ ಎಂಟ್ರಿಗಾಗಿ ಇರಿಸಿಕೊಂಡಿದ್ದ ಬೇರೆ-ಬೇರೆ ರಾಜ್ಯದ 28 ಮಹಿಳೆಯರನ್ನು ಜತೆಗೆ ಕಳುಹಿಸುತ್ತಿದ್ದರು. ನಂತರ ಮಹಿಳೆಯರ ಮೂಲಕ ಅಶ್ಲೀಲ ನೃತ್ಯ ಮಾಡಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಹೊರ ರಾಜ್ಯದಿಂದ ಮಹಿಳೆಯರನ್ನು ಕರೆಸಿಕೊಂಡು ಕಡಿಮೆ ವೇತನ ಕೊಟ್ಟು ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಇನ್ನು ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಈ ಸಂಬಂಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.